ಬೆಂಗಳೂರು-ಕಣ್ಣೂರು ರೈಲು ಕೋಯಿಕ್ಕೋಡ್ ವಿಸ್ತರಣೆಗೆ ಮಂಗಳೂರಿಗರ ವಿರೋಧವೇಕೆ?
ಬೆಂಗಳೂರು-ಕಣ್ಣೂರು ನಡುವೆ ವಯಾ ಮಂಗಳೂರು ಮೂಲಕ ಸಂಚರಿಸುವ ರಾತ್ರಿ ರೈಲನ್ನು ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ವಿಸ್ತರಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ.
ಆತ್ಮಭೂಷಣ್
ಮಂಗಳೂರು (ಸೆ.23): ಬೆಂಗಳೂರು-ಕಣ್ಣೂರು ನಡುವೆ ವಯಾ ಮಂಗಳೂರು ಮೂಲಕ ಸಂಚರಿಸುವ ರಾತ್ರಿ ರೈಲನ್ನು ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ವಿಸ್ತರಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಇದು ಕೋಯಿಕ್ಕೋಡ್‌ಗೆ ವಿಸ್ತರಣೆಯಾದರೆ ಮಂಗಳೂರಿನ ಪ್ರಯಾಣಿಕರಿಗೆ ಇರುವ ಮುಂಗಡ ಬುಕ್ಕಿಂಗ್‌ನ ಕೋಟಾ ಕಡಿತಗೊಳ್ಳಲಿದೆ.
ದಕ್ಷಿಣ ರೈಲ್ವೆ ಈಗಾಗಲೇ ಕೇಂದ್ರ ರೈಲ್ವೆ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಬೆಂಗಳೂರು-ಕಣ್ಣೂರು ರೈಲನ್ನು (ನಂಬರು 16511/ 512) ಕೋಯಿಕ್ಕೋಡ್‌ಗೆ ವಿಸ್ತರಿಸುವಂತೆ ಕೋರಿದೆ. ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಈ ರೈಲು ವಿಸ್ತರಣೆಗೆ ಬೇಡಿಕೆ ಕುದುರಿದೆ. ಈ ಬಗ್ಗೆ ಕೋಯಿಕ್ಕೋಡ್ ಸಂಸದ ಎಂ.ಕೆ.ರಾಘವನ್ ಅವರು ಇತ್ತೀಚೆಗೆ ರೈಲ್ವೆ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರವೇ ಈ ರೈಲು ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ವಿಸ್ತರಣೆಯಾಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ
ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ರೈಲಿನಲ್ಲಿ 90 ಕಿ.ಮೀ. ದೂರವಿದ್ದು, ಸುಮಾರು ಒಂದೂವರೆ ತಾಸು ಪ್ರಯಾಣದ ಅವಧಿ ಇದೆ. ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ನೇರ ರೈಲು ಸಂಪರ್ಕ ಇದೆ. ಆದರೂ ಕಣ್ಣೂರಿನಿಂದ ಕೋಯಿಕ್ಕೋಡ್ ಸಂಚಾರಕ್ಕೆ ಈ ಬೇಡಿಕೆ ಇರಿಸಲಾಗಿದೆ ಎಂಬುದು ಗಮನಾರ್ಹ.
ಮಂಗಳೂರಿಗೆ ಕೋಟಾ ನಷ್ಟ: ಪ್ರಸಕ್ತ ಬೆಂಗಳೂರು-ಮಂಗಳೂರು ನಡುವೆ 212 ಹಾಗೂ ಕಣ್ಣೂರು-ಬೆಂಗಳೂರು ನಡುವೆ 112 ಮುಂಗಡ ಬುಕ್ಕಿಂಗ್ ಕೋಟಾ ಸಿಗುತ್ತಿದೆ. ಸ್ಲೀಪರ್ ಕ್ಲಾಸ್‌ಗಳಲ್ಲಿ ಈ ಕೋಟಾ ಪ್ರತಿದಿನ ಭರ್ತಿಯಾಗಿ ಕಾಯುವಿಕೆ ಇದೆ. ಸೀಸನ್ ಸಂದರ್ಭಗಳಲ್ಲಿ ಕಾಯುವಿಕೆ ಪಟ್ಟಿ ಸಂಖ್ಯೆ ದುಪ್ಪಟ್ಟಿಗೂ ಅಧಿಕ ಇರುತ್ತದೆ. ಇಂಥದ್ದರಲ್ಲಿ ಈ ರೈಲು ಕಣ್ಣೂರಿನಿಂದ ಕೋಯಿಕ್ಕೋಡ್‌ಗೆ ವಿಸ್ತರಣೆಯಾದರೆ ಮುಂಗಡ ಬುಕ್ಕಿಂಗ್ ಕೋಟಾದಲ್ಲೂ ಕಡಿತವಾಗಲಿದೆ. ಆಗ ಮಂಗಳೂರಿಗೆ ರೋಡ್‌ಸೈಡ್ ಕೋಟಾ ಮಾತ್ರ ಸಿಗಲಿದೆ. ಅಂದರೆ ಸೀಟಿನ ಕೋಟಾ ಪ್ರಮಾಣ ಇಳಿಮುಖವಾಗಲಿದೆ. ಇದು ಎಷ್ಟರ ಪ್ರಮಾಣದಲ್ಲಿ ಕಡಿತವಾಗುತ್ತದೆ ಎಂಬ ಮಾಹಿತಿ ರೈಲು ಸಂಚಾರ ವಿಸ್ತರಣೆಗೊಂಡ ಬಳಿಕ ಸ್ಪಷ್ಟವಾಗಲಿದೆ.
ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ
ಮಂಗಳೂರಿಗರ ವಿರೋಧ: ಈಗಾಗಲೇ ಈ ರೈಲನ್ನು ಕೋಯಿಕ್ಕೋಡ್‌ಗೆ ವಿಸ್ತರಿಸುವುದಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ವಿರೋಧಿಸಿದ್ದು, ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಪಶ್ಚಿಮ ಕರಾವಳಿ ಯಾತ್ರಿ ಅಭಿವೃದ್ಧಿ ಸಮಿತಿ ಕೂಡ ಮನವಿ ಸಲ್ಲಿಸಿದೆ. ಮಂಗಳೂರಿಗರು ಸೀಟು ಕೋಟಾ ಕಡಿತಗೊಂಡು ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವುದು ದುಸ್ತರವಾಗಲಿದೆ ಎಂದು ರೈಲ್ವೆ ಸಂಘಟನೆಗಳು ಹೇಳುತ್ತಿವೆ.
ಪ್ರಸ್ತುತ ಮುಂಗಡ ಬುಕ್ಕಿಂಗ್‌ಗೆ ಸೀಟುಗಳ ಲಭ್ಯತೆ ಇದೆ. ಈ ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆಯಾದರೆ ಮಂಗಳೂರಿಗರಿಗೆ ಬೆಂಗಳೂರು ಪ್ರಯಾಣಕ್ಕೆ ಟಿಕೆಟ್ ಬುಕ್ಕಿಂಗ್ ಕೋಟಾ ಕಡಿತಗೊಂಡು ತೊಂದರೆಯಾಗಲಿದೆ. ಈ ವಿಚಾರವನ್ನು ದಕ್ಷಿಣ ರೈಲ್ವೆ ಮುಖ್ಯಸ್ಥರ ಗಮನಕ್ಕೆ ತಂದಿದ್ದು, ಯಾವುದೇ ಕಾರಣಕ್ಕೂ ಈ ರೈಲನ್ನು ಕಣ್ಣೂರಿನಿಂದ ವಿಸ್ತರಿಸಬಾರದು.
-ಹನುಮಂತ ಕಾಮತ್, ಅಧ್ಯಕ್ಷರು, ಪಶ್ಚಿಮ ಕರಾವಳಿ ಯಾತ್ರಿ ಸಮಿತಿ, ಮಂಗಳೂರು