ನೂರಾರು ಕೋಟಿ ಅಕ್ರಮ, ಹೀಗಾಗಿ ಬಿಲ್‌ಗೆ ತಡೆ, ತನಿಖೆಯನ್ನೇ ಕಿರುಕುಳ ಅಂದ್ರೆ ಹೇಗೆ?: ಸಚಿವ ಖರ್ಗೆ
ಮಾನದಂಡಗಳು ಇಲ್ಲದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 300 ಕೋಟಿ ರು. ಮೌಲ್ಯದ ವಸ್ತುಗಳನ್ನು ಪೂರೈಸಲಾಗಿದೆ ಎಂದು ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮಹೇಶ್ವರ್ ರಾವ್ ಅವರ ಸಮಿತಿಯು ವಿಚಾರಣೆ ನಡೆಸುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ಜ.15): ಕಿಯೋನಿಕ್ಸ್‌ನಲ್ಲಿ ನೂರಾರು ಕೋಟಿ ರು. ಮೊತ್ತದ ಅಕ್ರಮ ನಡೆದಿದ್ದು, ಆ ಬಗ್ಗೆ ತನಿಖಾ ಸಮಿತಿ ವಿಚಾರಣೆ ನಡೆಸುತ್ತಿರುವುದರಿಂದ ಬಿಲ್ ವಿಳಂಬವಾಗುತ್ತಿದೆ. ಕಿಯೋನಿಕ್ಸ್ ವೆಂಡರ್‌ಗಳ ಬ್ಲ್ಯಾಕ್‌ಮೇಲ್ ನಡೆಯು ವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಾನದಂಡಗಳು ಇಲ್ಲದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 300 ಕೋಟಿ ರು. ಮೌಲ್ಯದ ವಸ್ತುಗಳನ್ನು ಪೂರೈಸಲಾಗಿದೆ ಎಂದು ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮಹೇಶ್ವರ್ ರಾವ್ ಅವರ ಸಮಿತಿಯು ವಿಚಾರಣೆ ನಡೆಸುತ್ತಿದೆ. ಪ್ರಾಥಮಿಕ ವರದಿ ಸಿಕ್ಕಿದ್ದು, ಅಂತಿಮ ವರದಿ ಬರಬೇಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಮಾಡುವುದನ್ನು ಕಿರುಕುಳ ಎಂದರೆ ಹೇಗೆ? ಸಂಕಷ್ಟ ಇದೆ ಎಂದಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬಿಲ್ ಕೊಡದಿದ್ದರೆ ಆತ್ಮಹತ್ಯೆ, ಪ್ರಿಯಾಂಕ್, ಶರತ್ ಬಚ್ಚೇಗೌಡ ಹೊಣೆ: ಕಿಯೋನಿಕ್ಸ್ ವೆಂಡರ್ಸ್
ಅಕ್ರಮಗಳನ್ನು ಪತ್ತೆ ಮಾಡಲು, ವ್ಯವಸ್ಥೆಯನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಅದನ್ನು ವಿರೋಧಿಸುವುದು ಬ್ಲ್ಯಾಕ್‌ಮೇಲ್ ತಂತ್ರವಲ್ಲವೇ? ಅಕ್ರಮ ನಡೆದಿದ್ದರೂ ಬಿಲ್ ಪಾವತಿ ಮಾಡುವುದರಿಂದ ಮುಂದಾಗುವ ಸಮಸ್ಯೆಗಳಿಗೆ ಹೊಣೆ ಯಾರು? ವೆಂಡರ್ ಗಳು ತಾಳ್ಮೆ ವಹಿಸಬೇಕು. ಒತ್ತಡ ತರುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನನ್ನ ವಿರುದ್ದ ಯಾರೂ ಭ್ರಷ್ಟಾಚಾರದ ಆರೋಪ ಮಾಡುತ್ತಿಲ್ಲ. ನಾನು ಪಾರದರ್ಶಕ ವ್ಯವಸ್ಥೆ ತರಲು ಪ್ರಯತ್ನಿಸುತ್ತಿದ್ದೇನೆ. ಈ ವೇಳೆ ಕೆಲವರಿಗೆ ತೊಂದರೆ ಆಗುವುದು ಸಹಜ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ತಪ್ಪಿತಸ್ತರ ವಿರುದ್ದ ಕ್ರಮ: ಶರತ್ ಬಚ್ಚೇಗೌಡ
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಪ್ರತಿ ಕ್ರಿಯಿಸಿ, ಅಕೌಂಟೆಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ರು. ನಷ್ಟವಾಗಿದೆ ಎಂದು ತಿಳಿಸಲಾಗಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಉಳಿದವರಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.