ಸಾಲಮನ್ನಾಕ್ಕೆ ಅಗ್ರಹಿಸಿ ರೈತರಿಂದ ವಿಧಾನಸೌಧ ಚಲೋ ಅ.5 ರೊಳಗೆ ಸಭೆ ಕರೆದು ಚರ್ಚಿಸುವುದಾಗಿ ಸರ್ಕಾರ ಭರವಸೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

 ಬೆಂಗಳೂರು (ಸೆ.26) : ರೈತರ ಸಾಲ ಮನ್ನಾ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲ ವಸೂಲಾತಿ ನಿಲ್ಲಿಸಿ ಶೇ.25 ರಷ್ಟುಹೆಚ್ಚುವರಿ ಸಾಲ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಜಾಥಾ ಹೊರಟು ವಿಧಾನಸೌಧ ಚಲೋ ಮಾಡಲು ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಇಂದು ವಿಧಾನಸೌಧ ಚಲೋ; ನ.26ರಿಂದ ದೆಹಲಿ ಗಡಿಯಲ್ಲಿ ಮತ್ತೆ ಹೋರಾಟ!

ಸಂಯುಕ್ತ ಕಿಸಾನ್‌ ಮೋರ್ಚಾ(ರಾಜಕೀಯೇತರ) ರಾಷ್ಟ್ರೀಯ ರೈತ ಮುಖಂಡರ ಬೆಂಬಲದೊಂದಿಗೆ ಕರೆ ನೀಡಿದ್ದ ವಿಧಾನಸೌಧ ಚಲೋಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಅಪಾರ ಸಂಖ್ಯೆಯ ರೈತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ಧರಣಿ ನಡೆಸಿದ ರೈತರು, ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ ಮುಂದುವರೆಸಬೇಕು. ರೈತರಿಗೆ ಸಾಲ ನೀಡಲು ಸಿಬಿಲ್‌ ಸ್ಕೋರ್‌ ಬಳಸುತ್ತಿರುವುದನ್ನು ನಿಲ್ಲಿಸಬೇಕು. ರೈತರು ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಎಸ್‌ಟಿ ರದ್ದು ಮಾಡಬೇಕು: ರೈತರು ಸಂಕಷ್ಟದಲ್ಲಿ ಇರುವುದರಿಂದ ಸಾಲ ವಸೂಲಾತಿ ಮಾಡದೇ ಹೆಚ್ಚುವರಿಯಾಗಿ ಶೇ.25 ರಷ್ಟುಸಾಲ ನೀಡಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಅನುಷ್ಠಾನಕ್ಕೆ ತರಬೇಕು. ಕಬ್ಬಿನ ಎಫ್‌ಆರ್‌ಪಿ ದರ ಪುನರ್‌ ಪರಿಶೀಲಿಸಿ ವೈಜ್ಞಾನಿಕ ದರ ನಿಗದಿಪಡಿಸಬೇಕು. ಕೃಷಿ ಉತ್ಪನ್ನ ಹಾಗೂ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ರೈಲ್ವೆ ನಿಲ್ದಾಣದಿಂದ ರಾರ‍ಯಲಿ ಮೂಲಕ ವಿಧಾನಸೌಧ ಚಲೋಗೆ ರೈತರು ಮುಂದಾದಾಗ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಡೆದರು. ಆಗ ರೈತರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಆಗ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಹಲವು ಠಾಣೆಗಳಲ್ಲಿ ಇರಿಸಿ ಬಳಿಕ ಬಿಡುಗಡೆಗೊಳಿಸಿದರು. ಪ್ರತಿಭಟನೆಯಿಂದಾಗಿ ಮೆಜೆಸ್ಟಿಕ್‌, ಶೇಷಾದ್ರಿ ರಸ್ತೆ ಮತ್ತಿತರ ಕಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಗದಗ: ಕಬ್ಬಿನ ದರ ನಿಗದಿಗಾಗಿ 26ರಂದು ರೈತರಿಂದ ವಿಧಾನಸೌಧ ಚಲೋ

ಸಭೆ ಕರೆಯವುದಾಗಿ ಸರ್ಕಾರ ಭರವಸೆ: ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅ.5 ರೊಳಗೆ ಸಭೆ ಕರೆದು ಚರ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಸರ್ಕಾರದ ಪರವಾಗಿ ಸೋಮಣ್ಣ ಅವರು ರೈತ ಮುಖಂಡರೊಂದಿಗೆ ಸಭೆ ನಡೆಸಿದರು.ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್‌ ಎಚ್ಚರಿಸಿದರು.