ಗದಗ: ಕಬ್ಬಿನ ದರ ನಿಗದಿಗಾಗಿ 26ರಂದು ರೈತರಿಂದ ವಿಧಾನಸೌಧ ಚಲೋ
2022-23ನೇ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ಟನ್‌ಗೆ .3050 ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ, ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಸೆ. 26ರಂದು ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು.
ಗದಗ (ಸೆ.2) : 2022-23ನೇ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ಟನ್‌ಗೆ .3050 ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ, ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಸೆ. 26ರಂದು ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲೂಕು, ಜಿಲ್ಲಾಧಿಕಾರಿ ಕಚೇರಿ ಮುಂದೆ ಆ. 12ರಂದೇ ರಸ್ತೆ ತಡೆ ಚಳವಳಿ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ರಾಜ್ಯದ ರೈತರಿಗೆ ಮಾಡಿದ ಅವಮಾನ. ಸರ್ಕಾರದ ನಿರ್ಲಕ್ಷ್ಯತನ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಎಫ್‌ಆರ್‌ಪಿ ಹೆಚ್ಚಳಕ್ಕೆ ರೈತರಿಂದ ಹೆದ್ದಾರಿ ತಡೆ: ಸರ್ಕಾರದ ವಿರುದ್ಧ ಘೋಷಣೆ
ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಷ್, ಡಿಎಪಿ ಬೆಲೆ ಏರಿಕೆಯಾಗಿದೆ. ಕಟಾವು, ಕೂಲಿ ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಕ್ಕರೆ ಇಳುವರಿಯನ್ನು 10ರಿಂದ 10.25 ಏರಿಕೆ ಮಾಡಿ, 150 ಹೆಚ್ಚುವರಿ ಮಾಡಿ ಟನ್‌ಗೆ . 3050 ನಿಗದಿ ಮಾಡಿದೆ, ಇದರಿಂದ ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯವಾಗಿದೆ. ಈ ದರ ಪುನರ್ ಪರಿಶೀಲನೆ ಆಗಲೇಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ 10.25ಕ್ಕೆ ಏರಿಕೆ ಮಾಡಿ ಕಬ್ಬು ಬೆಳೆದ ರೈತರಿಗೆ ದ್ರೋಹ ಬಗೆದಿದೆ. ಇದರಿಂದ ರೈತರಿಗೆ ಟನ್‌ಗೆ . 75 ಕಡಿತವಾಗುತ್ತದೆ. ಉತ್ತರ ಪ್ರದೇಶ ಸರ್ಕಾರದ ಮಾನದಂಡದಂತೆ ಕನಿಷ್ಠ . 3500 ನಿಗದಿ ಆಗಲೇಬೇಕು. ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿದು ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಸಂಸತ್ತಿನಲ್ಲಿ ಬಿಲ್ ಮಂಡನೆ ಮಾಡಿದೆ. ಇದನ್ನು ರಾಜ್ಯದ 38 ಲಕ್ಷ ಕೃಷಿ ಪಂಪ್‌ಸೆಟ್ ರೈತರು ವಿರೋಧಿಸುತ್ತೇವೆ, ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್‌ನ್ನು ನಿಲ್ಲಿಸುವ ಹುನ್ನಾರದಿಂದ ಸಂಸತ್‌ನಲ್ಲಿ 2022 ವಿದ್ಯುತ್ ಬಿಲ್ ಮಂಡಿಸಲಾಗಿದೆ. ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರ, ಪಂಜಾಬ್, ಕೇರಳ, ಬಿಹಾರ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ. ಅದರಂತೆ ಕರ್ನಾಟಕ ರಾಜ್ಯವು ಕೂಡ ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು, ಕರ್ನಾಟಕದ ರೈತರನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಅತಿವೃಷ್ಟಿಯಿಂದಾಗಿ 7654 ಕೋಟಿ ನಷ್ಟವಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ . 250 ಕೋಟಿ ಬಿಡುಗಡೆ ಮಾಡುತ್ತದೆ. ಇದ್ಯಾವ ನ್ಯಾಯ? ರಾಜ್ಯದಲ್ಲಿ ಅತಿವೃಷ್ಟಿಹಾನಿ, ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದು, ಬೆಳೆ ಸಾಲ ಕಟ್ಟಲು ಕಷ್ಟವಾಗಿರುತ್ತದೆ. ಆದ್ದರಿಂದ ರೈತರ ಸಾಲವನ್ನು ಒಂದು ವರ್ಷ ನವೀಕರಣ ಮಾಡಿ, ಇರುವ ಸಾಲದ ಮೇಲೆ ಶೇ. 25ರಷ್ಟುಹೆಚ್ಚುವರಿಯಾಗಿ ಸಾಲ ನೀಡುವ ಯೋಜನೆ ಕೂಡಲೇ ಜಾರಿಗೆ ತರಬೇಕು. ಮೊಸರು, ಮಜ್ಜಿಗೆ, ಹಪ್ಪಳ, ಬೆಲ್ಲ, ಕೃಷಿ ಉಪಕರಣಗಳು ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕಗಳ ಮೇಲೆ ವಿಧಿಸಿರುವ ಜಿಎಸ್ಟಿರದ್ದುಗೊಳಿಸಬೇಕು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ . 9.90 ಲಕ್ಷ ಕೋಟಿ ಉದ್ದಿಮೆಗಳ ಸಾಲ ಮನ್ನಾ ಮಾಡಿದೆ. ದೇಶದ ರೈತ ಕೊರೋನಾ ವೇಳೆ ಲಾಕ್‌ಡೌನ್ ಸಮಸ್ಯೆ, ಅತಿವೃಷ್ಟಿಹಾನಿ ಸಂಕಷ್ಟಅನುಭವಿಸುತ್ತಿದ್ದಾನೆ. ಇಂತಹ ಕಷ್ಟಕಾಲದಲ್ಲಿ ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ರೈತರಿಗೆ ಕೃಷಿ ಸಾಲ ನೀಡುವಾಗ, ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣನೆ ಮಾಡಿ ಸಾಲ ನೀಡಬೇಕೆ ಬೇಡವೇ ಎಂಬ ನೀತಿ ಅನುಸರಿಸುತ್ತಿವೆ, ಇದನ್ನು ರದ್ದುಗೊಳಿಸಬೇಕು ಎಂದು ಆರ್‌ಬಿಐ ಮುಂದೆ ಪ್ರತಿಭಟನೆ ನಡೆಸಿ ಮನವಿ ಮಾಡಲಾಗಿದೆ ಎಂದರು.
ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್ ಬೆಳೆ ಜಲಾವೃತ
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹೂಗಾರ, ವಿಜಯಪುರದ ಧರೆಪ್ಪಗೌಡ ಬೀರದಾರ, ಅಂದಪ್ಪ ಕೋಳೂರು, ಸಿದ್ದನಗೌಡ ಪಾಟೀಲ ಮುಂತಾದವರು ಹಾಜರಿದ್ದರು.