ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು (07355/07356) ಏಪ್ರಿಲ್‌ನಿಂದ ಜೂನ್‌ವರೆಗೆ ಒಟ್ಟು 9 ಟ್ರಿಪ್‌ಗಳನ್ನು ಮಾಡಲಿದ್ದು, ಹಾವೇರಿ, ದಾವಣಗೆರೆ, ತುಮಕೂರು, ಸೇಲಂ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲ್ಲಲಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ಶ್ರೀಸಿದ್ಧಾರೂಢ ಸ್ವಾಮೀಜಿ (ಎಸ್‌ಎಸ್‌ಎಸ್) ಹುಬ್ಬಳ್ಳಿ ಜಂಕ್ಷನ್ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಒಟ್ಟು 9 ಟ್ರಿಪ್‌ಗಳ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ.

ರೈಲು ಸಂಖ್ಯೆ ಹೀಗಿದೆ

ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ–ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 5, 12, 19, 26 ಹಾಗೂ ಮೇ 3, 10, 17, 24 ಮತ್ತು 31ರಂದು ಪ್ರತೀ ಭಾನುವಾರ ಬೆಳಗ್ಗೆ 6.50ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲು ಮರುದಿನ ಬೆಳಗ್ಗೆ 5.20ಕ್ಕೆ ರಾಮೇಶ್ವರಂ ತಲುಪುವಂತೆ ವೇಳಾಪಟ್ಟಿ ರೂಪಿಸಲಾಗಿದೆ.

ಇದರ ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 07356 ರಾಮೇಶ್ವರಂ–ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 6, 13, 20, 27 ಹಾಗೂ ಮೇ 4, 11, 18, 25 ಮತ್ತು ಜೂನ್ 1ರಂದು ಪ್ರತೀ ಸೋಮವಾರ ರಾತ್ರಿ 8 ಗಂಟೆಗೆ ರಾಮೇಶ್ವರಂನಿಂದ ಹೊರಡಲಿದೆ. ಈ ರೈಲು ಮರುದಿನ ರಾತ್ರಿ 7.40ಕ್ಕೆ ಹುಬ್ಬಳ್ಳಿ ತಲುಪಲಿದೆ.

ಯಾವೆಲ್ಲ ನಿಲ್ದಾಣಗಳಲ್ಲಿ ಪ್ರಯಾಣ

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮಧುರೈ ಹಾಗೂ ರಾಮನಾಥಪುರಂ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳಲ್ಲಿ ವಿವಿಧ ವರ್ಗಗಳ ಬೋಗಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ಎಸಿ ಫಸ್ಟ್ ಕ್ಲಾಸ್, 2 ಎಸಿ ಟು-ಟೈರ್, 3 ಎಸಿ ತ್ರೀ-ಟೈರ್, 6 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಸೇರಿದಂತೆ ಒಂದು ಪ್ಯಾಂಟ್ರಿ ಕಾರ್, ಒಂದು ಜನರೇಟರ್-ಕಮ್-ಬ್ರೇಕ್ ವ್ಯಾನ್ ಹಾಗೂ ಒಂದು ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ ಸೌಲಭ್ಯಗಳೊಂದಿಗೆ) ಸೇರಿವೆ.

ಈ ವಿಶೇಷ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಈಗಾಗಲೇ ಪ್ರಾರಂಭಗೊಂಡಿದ್ದು, ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ. ಬೇಸಿಗೆ ರಜೆ ಪ್ರಯಾಣವನ್ನು ಸುಗಮಗೊಳಿಸುವ ಈ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.