ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿರುವ ನಡುವೆಯೇ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಬಲವಂತದ ಮತಾಂತರದ ಆರೋಪಗಳನ್ನು ತನಿಖೆ ಮಾಡುವ ಉದ್ದೇಶದಿಂದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವ ಘೋಷಣೆ ಮಾಡಿದೆ.
ಭೋಪಾಲ್ (ಮೇ.06): ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿರುವ ನಡುವೆಯೇ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಬಲವಂತದ ಮತಾಂತರದ ಆರೋಪಗಳನ್ನು ತನಿಖೆ ಮಾಡುವ ಉದ್ದೇಶದಿಂದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವ ಘೋಷಣೆ ಮಾಡಿದೆ. ಇತ್ತೀಚೆಗೆ ಪುರುಷರ ಗುಂಪೊಂದು ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಿ, ಅತ್ಯಾಚಾರವೆಸಗಿದ ಘಟನೆ ಭೋಪಾಲ್‌ನಲ್ಲಿ ನಡೆದಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಧ್ಯಪ್ರದೇಶ ಪೊಲೀಸ್ ಮುಖ್ಯಾಲಯ ಎಸ್‌ಐಟಿ ರಚನೆಯ ಆದೇಶ ಹೊರಡಿಸಿದೆ.
‘ಮದುವೆಯ ಉದ್ದೇಶದ ಬಲವಂತದ ಮತಾಂತರ ಅಪರಾಧ. ಬೆದರಿಕೆ, ಬ್ಲ್ಯಾಕ್‌ಮೇಲ್ ಮೂಲಕ ಮತಾಂತರ ಮಾಡಿ ಮದುವೆ ಆಗುವುದು ಹಾಗೂ ಧಾರ್ಮಿಕ ಗುರುತು ಮರೆಮಾಚಿ ಮದುವೆ ಆಗುವುದೂ ಅಪರಾಧ. ಇಂಥ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಎಸ್‌ಐಟಿ ಹೊಂದಿದೆ’ ಎಂದು ಅದು ಹೇಳಿದೆ. ಈಗಾಗಲೇ ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನಿದೆ. ಮಧ್ಯಪ್ರದೇಶದಲ್ಲಿ ಬಲವಂತದ ಮತಾಂತರ ತಡೆ ಕಾನೂನು ಇದೆ. ಮಹಾರಾಷ್ಟ್ರದಲ್ಲೂ ಲವ್ ಜಿಹಾದ್ ವಿರುದ್ಧ ಕಾಯ್ದೆಗೆ ಕೂಗು ಕೇಳಿಬಂದಿತ್ತು. ಹೀಗಾಗಿ ಅಧ್ಯಯನಕ್ಕೆ ಸರ್ಕಾರ ಸಮಿತಿ ರಚಿಸಿದೆ.
ಸ್ತ್ರೀಯರ ಬಲವಂತದ ಮತಾಂತರಕ್ಕೆ ಗಲ್ಲು: ‘ಮಹಿಳೆಯರ ಬಲವಂತದ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸಲು ನಮ್ಮ ಸರ್ಕಾರ ಕಾನೂನನ್ನು ತಿದ್ದುಪಡಿ ಮಾಡಲಿದೆ’ ಎಂದುಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅವರು, ‘ಈಗಾಗಲೇ ನಮ್ಮ ಮುಗ್ಧ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೆ ತಂದಿದ್ದೇವೆ. ಇನ್ನು ಮಧ್ಯಪ್ರದೇಶದಲ್ಲಿ ಹುಡುಗಿಯರನ್ನು ಮತಾಂತರಿಸುವವರಿಗೆ ಮರಣದಂಡನೆ ವಿಧಿಸುವ ನಿಬಂಧನೆಯನ್ನು ಜಾರಿಗೆ ತರಲಾಗುವುದು.
ಒಳಮೀಸಲಾತಿ ಸಮೀಕ್ಷೆ ಮೊದಲ ದಿನ ಸುಸೂತ್ರ: ರಾಜಕೀಯ ಪ್ರಾತಿನಿಧ್ಯದ ವಿವರವೂ ಸಂಗ್ರಹ
ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಈ ನಿಬಂಧನೆಯನ್ನು ಜಾರಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಪರಾಧಿಯನ್ನು ಬಿಡುವುದಿಲ್ಲ. ಅಕ್ರಮ ಮತಾಂತರಕ್ಕೆ ಅವಕಾಶ ನೀಡಲ್ಲ’ ಎಂದು ಹೇಳಿದರು. ಬಳಿಕ ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿ, ‘ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಜಾರಿಯಲ್ಲಿದೆ. ಬಲವಂತವಾಗಿ ಅಥವಾ ಮದುವೆಯಾಗಲು ಆಮಿಷವೊಡ್ಡುವ ಮೂಲಕ ಅವರ ಮತಾಂತರ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದೆ.


