ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿಯು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆದ ಸಂಚು ಎಂದು ವಿಪಕ್ಷ ನಾಯಕ ಆರ್. ಅಶೋಕ ಗಂಭೀರವಾಗಿ ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯ, ಪೊಲೀಸ್ ಇಲಾಖೆಯ ದುರ್ಬಳಕೆ ಮತ್ತು ಎಸ್‌ಪಿ ಅಮಾನತನ್ನು ಖಂಡಿಸಿದರು.
ಬಳ್ಳಾರಿ (ಜ.04): ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, 'ಇದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆದ ಸಂಚು' ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಾಗಿವೆ
ಬಳ್ಳಾರಿಯಲ್ಲಿ ದೀಪಾವಳಿ ಪಟಾಕಿ ಮಾದರಿಯಲ್ಲಿ ಗುಂಡು ಹಾರಿಸಲಾಗಿದೆ. ಗುಂಡು ಹಾರುವ ವಿಡಿಯೋ ಕಣ್ಣಮುಂದಿದ್ದರೂ ಯಾರೂ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳುತ್ತಿರುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ಕಳ್ಳರೇ ಪೊಲೀಸರು, ಪೊಲೀಸರೇ ಕಳ್ಳರಂತಾಗಿದ್ದಾರೆ. ವರ್ಗಾವಣೆ ದಂಧೆಯ ಇಂಪ್ಯಾಕ್ಟ್‌ನಿಂದಾಗಿ ಪೊಲೀಸ್ ಇಲಾಖೆ ಸಂಪೂರ್ಣ ಹದಗೆಟ್ಟಿದೆ. ಇಂದು ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ' ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಗೂಂಡಾ ರಾಜಕೀಯದ ಉಗಮ
ಬಳ್ಳಾರಿಯಲ್ಲಿ ಗೂಂಡಾ ಸಂಸ್ಕೃತಿ ಮಿತಿಮೀರಿದೆ ಎಂದು ದೂರಿದ ಅಶೋಕ, 'ಪಂಚೆ ಎತ್ತಿಕೊಂಡು ಪಾದಯಾತ್ರೆ ಮಾಡಿದವರು ಈಗ ಬಳ್ಳಾರಿಯನ್ನು ಗೂಂಡಾಗಳ ತಾಣ ಮಾಡಿದ್ದಾರೆ. ಸರ್ಕಾರದ ಅನುಮತಿ ಇಲ್ಲದೆ, ತೆರಿಗೆ ಕಟ್ಟದೆ ರಸ್ತೆಯುದ್ದಕ್ಕೂ ಬ್ಯಾನರ್ ಹಾಕಿದ್ದಾರೆ. ಕುಡಿದು ಚೇರ್ ಹಾಕಿಕೊಂಡು ಬ್ಯಾನರ್ ಕಟ್ಟುವ ಅನಿವಾರ್ಯತೆ ಏನಿತ್ತು? ಶಾಸಕರ ಮನೆ ಮುಂದೆ ಖಾಸಗಿ ಗನ್ ಮ್ಯಾನ್ ಕರೆತಂದು ಗುಂಡು ಹಾರಿಸಿರುವುದು ತಿರುಗುಬಾಣವಾಗಲಿದೆ. ಈ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ಒಪ್ಪಿಸಬೇಕು. ಸಿಐಡಿಯಿಂದ ನ್ಯಾಯ ಸಿಗುವುದಿಲ್ಲ' ಎಂದರು.
ಇಂಟಲಿಜೆನ್ಸ್ ವೈಫಲ್ಯ ಮತ್ತು ಎಸ್ಪಿ ಅಮಾನತು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಮಾನತು ಕ್ರಮವನ್ನು ಟೀಕಿಸಿದ ಅವರು, 'ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವ ಬದಲು ಗೃಹ ಸಚಿವರೇ ರಾಜೀನಾಮೆ ನೀಡಬೇಕಿತ್ತು. ಇಂಟಲಿಜೆನ್ಸ್ ಇಲಾಖೆ ಸಂಪೂರ್ಣ ಸತ್ತೋಗಿದೆ. ಒಂದು ಕಿಲೋಮೀಟರ್ ದೂರದಿಂದ ಜನ ಮೆರವಣಿಗೆಯಲ್ಲಿ ಬರುವಾಗ ಇಂಟಲಿಜೆನ್ಸ್ ಏನು ಮಾಡುತ್ತಿತ್ತು? ಅಧಿಕಾರಿಗಳನ್ನು ಮತ್ತು ಅಸಲಿ ಅಪರಾಧಿಗಳನ್ನು ರಕ್ಷಿಸಲು ಎಸ್ಪಿಯನ್ನು ಬಲಿಪಶು ಮಾಡಲಾಗಿದೆ. ಅಧಿಕಾರಿಗಳು ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ' ಎಂದು ವಿಷಾದಿಸಿದರು.
ಕಾಂಗ್ರೆಸ್‌ನ 'ಸುಳ್ಳು ಶೋಧನಾ ಸಮಿತಿ'
ಕಾಂಗ್ರೆಸ್ ರಚಿಸಿರುವ ಸತ್ಯಶೋಧನಾ ಸಮಿತಿಯನ್ನು 'ಸುಳ್ಳು ಶೋಧನಾ ಸಮಿತಿ' ಎಂದು ಕರೆದ ಅಶೋಕ, 'ವಿಡಿಯೋದಲ್ಲೇ ಎಲ್ಲವೂ ಸ್ಪಷ್ಟವಾಗಿರುವಾಗ ಇವರು ಇನ್ನೇನು ಶೋಧ ಮಾಡುತ್ತಾರೆ? ಈ ಸಮಿತಿ ಮೊದಲೇ ಸಿದ್ಧವಾಗಿರುವ ಸುಳ್ಳು ವರದಿಯನ್ನೇ ನೀಡಲಿದೆ. ಕಾಂಗ್ರೆಸ್‌ಗೆ ರಾಮನ ಕಂಡರೆ ಆಗುವುದಿಲ್ಲ, ಇನ್ನು ವಾಲ್ಮೀಕಿ ಮಹರ್ಷಿಗಳನ್ನು ಗೌರವಿಸುತ್ತಾರೆಯೇ? ಬಿಜೆಪಿಯೇ ವಾಲ್ಮೀಕಿ ದಿನಾಚರಣೆಗೆ ರಜೆ ನೀಡಿ, ಪ್ರತಿಮೆ ಸ್ಥಾಪಿಸಿದ್ದು. ನಾವು ಕಾರ್ಯಕರ್ತರ ಪರವಾಗಿದ್ದೇವೆ, ಬೆಂಗಳೂರಿನಲ್ಲಿ ಹೋರಾಟಕ್ಕೆ ಅನುಮತಿ ನೀಡಲಿ ಬಿಡಲಿ, ನಾವು ಹೋರಾಟ ಮಾಡಿಯೇ ತೀರುತ್ತೇವೆ' ಎಂದು ಎಚ್ಚರಿಸಿದರು.


