Asianet Suvarna News Asianet Suvarna News

ಕಾಸರಗೋಡು ಕನ್ನಡ ಶಾಲೆಗಳ ಮೇಲಿನ ಮಲಯಾಳಿ ಸವಾರಿಗೆ ಪರಿಹಾರವೇನು?

ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಳೆದ ವರ್ಷ ಪ್ರಕಟಿಸಿದ ವಿವಿಧ ಕನ್ನಡ ಮಾಧ್ಯಮ ಶಿಕ್ಷಕರ ರಾರ‍ಯಂಕ್‌ ಪಟ್ಟಿಯಲ್ಲಿ 23 ಮಂದಿ ಕನ್ನಡ ಬಾರದ ಶಿಕ್ಷಕರಿದ್ದಾರೆ. ಅವರಲ್ಲಿ ಈವರೆಗೆ ಆರು ಮಂದಿ ಶಿಕ್ಷಕ ಹುದ್ದೆಗೆ ನೇಮಕವಾಗಿದ್ದಾರೆ. ಕನ್ನಡಿಗರ ವಿರೋಧದ ನಡುವೆಯೂ ಇನ್ನಷ್ಟುಮಂದಿ ಕನ್ನಡ ಗೊತ್ತಿಲ್ಲದ ಮಲಯಾಳಿ ಶಿಕ್ಷಕರ ನೇಮಕಕ್ಕೆ ಹಸಿರು ನಿಶಾನೆ ದೊರೆತಿದೆ. 

How to tackle Malayalam influence on Kasaragodu Kannada Schools
Author
Bengaluru, First Published Oct 20, 2019, 3:08 PM IST

ಮಂಗಳೂರು (ಅ. 20): ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಳೆದ ವರ್ಷ ಪ್ರಕಟಿಸಿದ ವಿವಿಧ ಕನ್ನಡ ಮಾಧ್ಯಮ ಶಿಕ್ಷಕರ ರಾರ‍ಯಂಕ್‌ ಪಟ್ಟಿಯಲ್ಲಿ 23 ಮಂದಿ ಕನ್ನಡ ಬಾರದ ಶಿಕ್ಷಕರಿದ್ದಾರೆ. ಅವರಲ್ಲಿ ಈವರೆಗೆ ಆರು ಮಂದಿ ಶಿಕ್ಷಕ ಹುದ್ದೆಗೆ ನೇಮಕವಾಗಿದ್ದಾರೆ. ಕನ್ನಡಿಗರ ವಿರೋಧದ ನಡುವೆಯೂ ಇನ್ನಷ್ಟುಮಂದಿ ಕನ್ನಡ ಗೊತ್ತಿಲ್ಲದ ಮಲಯಾಳಿ ಶಿಕ್ಷಕರ ನೇಮಕಕ್ಕೆ ಹಸಿರು ನಿಶಾನೆ ದೊರೆತಿದೆ.

ಇದು ಗಡಿನಾಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತು ಶಾಲೆಗಳ ಭವಿಷ್ಯದ ಜೊತೆ ಕೇರಳ ಸರ್ಕಾರ ಚೆಲ್ಲಾಟ ಆಡುತ್ತಿರುವುದಕ್ಕೆ ಸ್ಪಷ್ಟನಿದರ್ಶನ. ಈ ಹಿನ್ನೆಲೆಯಲ್ಲಿ ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳ ಸಮಸ್ಯೆ ಏನು, ಅದಕ್ಕೆ ಪರಿಹಾರ ಏನು ಎಂಬ ವಿವರ ಇಲ್ಲಿದೆ.

ಕೇರಳದಲ್ಲಿ 20 ಸಾವಿರ ಕನ್ನಡಿಗ ವಿದ್ಯಾರ್ಥಿಗಳು

ಕೇರಳದ ಕಾಸರಗೋಡಿನ ಕಾಸರಗೋಡು, ಮಂಜೇಶ್ವರ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಸುಮಾರು 20 ಸಾವಿರದಷ್ಟುಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಸುಮಾರು 1,500ರಷ್ಟುಕನ್ನಡಿಗ ಶಿಕ್ಷಕರಿದ್ದಾರೆ. ಒಟ್ಟು 180ಕ್ಕೂ ಅಧಿಕ ಕನ್ನಡ ಮಾಧ್ಯಮ ಶಾಲೆಗಳಿದ್ದು, ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಇದೆ. ಕಾಸರಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಸಂಶೋಧನಾ ಕೇಂದ್ರ, ಪೆರಿಯದಲ್ಲಿ ಕೇಂದ್ರೀಯ ಸಂಶೋಧನಾ ಕೇಂದ್ರ, ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಐಚ್ಛಿಕ ಕನ್ನಡ ಸೇರಿದಂತೆ ಕನ್ನಡ ಮಾಧ್ಯಮ ಶಾಲೆಗಳು ದಟ್ಟವಾಗಿವೆ.

ಬೇಕಲ ಶಾಲೆಗೆ ಶೀಘ್ರ ಕನ್ನಡಿಗ ಶಿಕ್ಷಕರ ನೇಮಕ

ಕನ್ನಡ ವಿದ್ಯಾರ್ಥಿಗಳ ಸಮಸ್ಯೆ ಏನು?

ಕಾಸರಗೋಡಿನ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಕಳೆದ ವರ್ಷದಿಂದ ಶಿಕ್ಷಕರ ನೇಮಕ ನಡೆಯುತ್ತಿದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಶಿಕ್ಷಣ ಇಲಾಖೆ ನೇಮಕ ಮಾಡುತ್ತಿದೆ. ಹೀಗೆ ನೇಮಕಗೊಳ್ಳುವ ಶಿಕ್ಷಕರು ತರಹೇವಾರಿ ಇದ್ದಾರೆ. ಅದರ ಒಂದು ಸ್ಯಾಂಪಲ್‌ ಹೀಗಿದೆ. ಇಲ್ಲಿನ ಗಡಿನಾಡು ಶಾಲೆಗಳಿಗೆ ನೇಮಕಗೊಂಡ ಶಿಕ್ಷಕರೊಬ್ಬರು ಪೂರ್ತಿ ಅಂಧತ್ವದಿಂದ ಬಳಲುತ್ತಿದ್ದಾರೆ. ಕಣ್ಣು ಕಾಣದೆ ಬರೆಯಲೂ ಆಗುತ್ತಿಲ್ಲ. ಹಾಗಾಗಿ ಹೆಬ್ಬೆಟ್ಟು ಹಾಕುತ್ತಾರೆ. ವಿದ್ಯಾರ್ಥಿಗಳ ಪೋಷಕರು ಈ ಶಿಕ್ಷಕರ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಅ

ದರಲ್ಲಿ ಈ ಶಿಕ್ಷಕರಿಗೆ ಕನ್ನಡ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದ್ದರೂ, ತನ್ನಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎಂಬ ಪಾಪಪ್ರಜ್ಞೆಯೇ ಇಲ್ಲದೆ ‘ಇದು ನನ್ನ ಹಕ್ಕು’ ಎನ್ನುತ್ತಿದ್ದಾರೆ. ಇಂತಹ ಹಲವು ದೃಷ್ಟಾಂತ ತಲಪಾಡಿಯಿಂದ ನೀಲೇಶ್ವರ ವರೆಗಿನ ಗಡಿನಾಡಿನ ಕನ್ನಡ ನೆಲದಲ್ಲಿ ಕಂಡುಬರುತ್ತದೆ. ಇಂತಹ ವಿದ್ಯಮಾನಗಳು ಅಲ್ಲಿನ ಕನ್ನಡಿಗರಿಗೆ ಹೊಸತಲ್ಲವಾದರೂ ನಿತ್ಯವೂ ಕನ್ನಡದ ಮೇಲಿನ ಸವಾರಿ ಹಾಗೂ ವಿರೋಧವನ್ನು ಎದುರಿಸಿಕೊಂಡು ಬದುಕುವ ದುಸ್ಥಿತಿ ಮಾತ್ರ ತಪ್ಪುತ್ತಿಲ್ಲ.

ಹಂತ ಹಂತವಾಗಿ ಮಲಯಾಳಿ ಶಿಕ್ಷಕರ ನೇಮಕ

2018 ರಲ್ಲಿ ಕಾಸರಗೋಡಿನ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 23 ಶಿಕ್ಷಕರ ಪೈಕಿ ಕಳೆದ ವರ್ಷ ನಾಲ್ವರು ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿದೆ. ಕಳೆದ ಆಗಸ್ಟ್‌ನಲ್ಲಿ ಮಂಗಲ್ಪಾಡಿ ಹೈಸ್ಕೂಲ್‌ಗೆ ಗಣಿತ ಪಾಠಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಲಾಯಿತು. ಆಗ ಸಾಕಷ್ಟುಪ್ರತಿಭಟನೆ, ಹೋರಾಟ ನಡೆದು ಆ ಶಿಕ್ಷಕರನ್ನು ರಜೆ ಮೇಲೆ ಕಳುಹಿಸಲಾಗಿತ್ತು.

ಇನ್ನಿಬ್ಬರು ಶಿಕ್ಷಕರು ಪೈವಳಿಕೆ ಮತ್ತು ಬಂದಡ್ಕ ಶಾಲೆಗೆ ನೇಮಕಗೊಂಡಿದ್ದರು. ಅಲ್ಲಿಯೂ ಕನ್ನಡಿಗ ವಿದ್ಯಾರ್ಥಿಗಳ ಪ್ರತಿಭಟನೆ ಎದುರಾದಾಗ ಕೇರಳ ಶಿಕ್ಷಣ ಇಲಾಖೆ ಅವರನ್ನು ಕನ್ನಡ ಕಲಿಯಲು ಮೈಸೂರಿಗೆ ಕಳುಹಿಸಿತು. ಈ ವರ್ಷ ಅಕ್ಟೋಬರ್‌ನಲ್ಲಿ ಮತ್ತೆ ಇಬ್ಬರು ಮಲಯಾಳಿ ಭಾಷಿಕ ಶಿಕ್ಷಕರ ನೇಮಕವಾದಾಗಲೂ ಪ್ರತಿಭಟನೆ ನಡೆದಿವೆ. ಗಡಿನಾಡಿನಲ್ಲಿ ಕನ್ನಡಿಗರಿಂದ ಇಷ್ಟೆಲ್ಲ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೂ ಇದುವರೆಗೆ 23 ಮಂದಿಯಲ್ಲಿ ಕೇವಲ ಆರು ಶಿಕ್ಷಕರ ನೇಮಕ ಮಾತ್ರ ಆಗಿದೆ. ಇನ್ನು ಉಳಿದ 17 ಶಿಕ್ಷಕರನ್ನು ಹಂತ ಹಂತವಾಗಿ ನೇಮಿಸುವ ಸೂಚನೆಯನ್ನು ಕೇರಳ ಶಿಕ್ಷಣ ಇಲಾಖೆ ನೀಡಿದೆ.

ಮಲಯಾಳಿ ಶಿಕ್ಷಕರ ವಿರುದ್ಧ ಮುಂದುವರೆದ ಪ್ರತಿಭಟನೆ

ಇನ್ಮುಂದೆ ಈ ಸಮಸ್ಯೆ ಇರೋದಿಲ್ಲವೆ?

ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕಗೊಳಿಸಲು 2016ರಲ್ಲಿ ಕೇರಳ ಸರ್ಕಾರ ಪ್ರಕಟಣೆ ಹೊರಡಿಸಿತ್ತು. 2018ರಲ್ಲಿ ಶಿಕ್ಷಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಆಗಲೇ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿ ಆರಂಭಿಸಿತ್ತು. ಆಗ 1ರಿಂದ 10ನೇ ತರಗತಿವರೆಗೆ ಕನ್ನಡ ಭಾಷೆ ಗೊತ್ತಿದ್ದರೆ ಸಾಕು ಎಂಬ ನಿಯಮ ಇತ್ತು. ಇದುವೇ ಮಲಯಾಳಿ ಭಾಷಿಕ ಶಿಕ್ಷಕರು ಅಡ್ಡದಾರಿ ಬಳಸಿ ಕನ್ನಡ ಮಾಧ್ಯಮ ಶಾಲೆಗೆ ಸೇರ್ಪಡೆಗೊಳ್ಳಲು ಹಾದಿ ಮಾಡಿಕೊಟ್ಟಿತು. ಆದರೆ 2018ರಲ್ಲಿ ಕನ್ನಡ ಪರ ಸಂಘಟನೆಗಳ ಕೋರಿಕೆ ಮೇರೆಗೆ ಕೇರಳ ಸರ್ಕಾರ, ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡಿತು.

ಕನ್ನಡ ಮಾಧ್ಯಮ ಕಲಿಕೆಯನ್ನು ಮೂಲ ಅರ್ಹತೆಯಲ್ಲಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಹೀಗೆ ಆದೇಶ ಇದ್ದರೂ ಇದು 2016ರ ಪ್ರಕಟಣೆಗೆ ಅನ್ವಯ ಆಗುವುದಿಲ್ಲ. ಆದ್ದರಿಂದ 2016ರ ಪ್ರಕಟಣೆಯಂತೆ 2018ರಲ್ಲಿ ನೇಮಕಗೊಳ್ಳುತ್ತಿರುವ 23 ಮಂದಿ ಶಿಕ್ಷಕರು ಕೂಡ ಅನಿವಾರ್ಯವಾಗಿ ಕನ್ನಡ ಗೊತ್ತಿಲ್ಲದಿದ್ದರೂ ಗೊತ್ತಿದೆ ಎಂದು ಶಿಫಾರಸು ಪತ್ರ ಹಾಜರುಪಡಿಸಿ ಕನ್ನಡ ಮಾಧ್ಯಮ ಶಾಲೆಗೆ ಸೇರುವಂತಾಗಿದೆ. ಆದರೆ ಈ ಸಮಸ್ಯೆ 2018 ಮತ್ತು ನಂತರದ ನೇಮಕಾತಿ ಪ್ರಕ್ರಿಯೆಗಳಿಗೆ ಅನ್ವಯವಾಗುವುದಿಲ್ಲ. 2018ರ ನಂತರ ಕೆಪಿಎಸ್‌ಸಿ ಪರೀಕ್ಷೆಗೆ ಬರೆದು ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ಮೂಲದಲ್ಲಿ ಕನ್ನಡ ಗೊತ್ತಿರಲೇಬೇಕು ಎಂಬ ನಿಯಮ ಪಾಲನೆಯಾಗುತ್ತದೆ.

ಕೋರ್ಟ್‌ ಮೆಟ್ಟಿಲು ಹತ್ತಿದ ವಿವಾದ

ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ವಿವಾದ ಕೇರಳ ಹೈಕೋರ್ಟ್‌ ಮೆಟ್ಟಿಲು ಹತ್ತಿದೆ. ಕಾಸರಗೋಡಿನ ಕನ್ನಡ ಹೋರಾಟ ಸಮಿತಿ ಕಳೆದ ಆಗಸ್ಟ್‌ನಲ್ಲಿ ಅಲ್ಲಿನ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ. ಕನ್ನಡ ಶಾಲೆಗಳಿಗೆ ನೇಮಕ ಮಾಡಿರುವ ಮಲಯಾಳಿ ಶಿಕ್ಷಕರನ್ನು ಮಲಯಾಳಿ ಭಾಷಿಕ ಶಾಲೆಗಳಿಗೆ ಅಥವಾ ಬೋಧಕೇತರ ಹುದ್ದೆಗೆ ವರ್ಗಾವಣೆ ಮಾಡಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷೆಯ ಶಿಕ್ಷಕರನ್ನೇ ನೇಮಕಗೊಳಿಸಬೇಕು ಎಂದು ರಿಟ್‌ ದಾಖಲಿಸಲಾಗಿದೆ. ಅದು ಇನ್ನೂ ವಿಚಾರಣಾ ಹಂತದಲ್ಲೇ ಇದೆ.

ಕನ್ನಡ ಗೊತ್ತಿಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ?

ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸುವಾಗ ಕೆಪಿಎಸ್‌ಸಿಯ ಇಬ್ಬರು ಸದಸ್ಯರಲ್ಲದೆ, ಆಯಾ ವಿಷಯ ತಜ್ಞರು ಇರುತ್ತಾರೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಆಳವಾದ ಪರಿಜ್ಞಾನ ಇದೆಯೇ ಎಂದು ಪರೀಕ್ಷಿಸಲು ಕಾಲೇಜುಗಳ ಕನ್ನಡ ಪ್ರಾಧ್ಯಾಪಕರು ಅಥವಾ ನಿವೃತ್ತ ಕನ್ನಡ ಪ್ರಾಧ್ಯಾಪಕರನ್ನು ಭಾಷಾ ತಜ್ಞರೆಂಬ ನೆಲೆಯಲ್ಲಿ ಅಭಿಪ್ರಾಯ ಕೇಳುತ್ತಾರೆ. ಅಚ್ಚರಿಯ ಸಂಗತಿ ಎಂದರೆ, ಇಂತಹ ಭಾಷಾ ತಜ್ಞರು ಸಂದರ್ಶನದಲ್ಲಿ ಇದ್ದರೂ ಕನ್ನಡ ಶಾಲೆಗಳಿಗೆ ಕನ್ನಡದ ಗಂಧಗಾಳಿಯೇ ಗೊತ್ತಿಲ್ಲದ ಮಲಯಾಳಿ ಶಿಕ್ಷಕರ ನೇಮಕವಾಗುತ್ತಿದೆ. ಇಲ್ಲಿ ಕನ್ನಡ ಭಾಷಾ ತಜ್ಞರು ಕರ್ತವ್ಯಲೋಪ ಎಸಗಿರುವುದು ಅಷ್ಟೇ ನಿಚ್ಚಳ.

ಕರ್ನಾಟಕದಲ್ಲಿ ಮರಾಠಿ, ತೆಲುಗು, ತಮಿಳು, ಉರ್ದು ವಿದ್ಯಾರ್ಥಿಗಳಿಗೆ ಏನೂ ತೊಂದರೆಯಿಲ್ಲ!

ಕೇರಳದ ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಕಾಸರಗೋಡಿನಲ್ಲಿ ಸಾಕಷ್ಟುಪ್ರತಿಭಟನೆಗಳು ನಡೆದಿವೆ. ಕನ್ನಡ ಪರ ಸಂಘಟನೆಗಳು ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿವೆ. ಮಾತ್ರವಲ್ಲ ಕರಾವಳಿಯ ಸಂಸದರಿಗೂ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ, ಸದ್ಯ ಬಗೆಹರಿಯುವ ಲಕ್ಷಣವೂ ಕಾಣುತ್ತಿಲ್ಲ. ವಿಚಿತ್ರ ಎಂದರೆ, ಇಂತಹ ಸಮಸ್ಯೆ ಇರುವುದು ಕೇರಳದ ಗಡಿನಾಡಿನಲ್ಲಿ ಮಾತ್ರ. ಕರ್ನಾಟಕದಲ್ಲೂ ಮರಾಠಿ, ತೆಲುಗು, ತಮಿಳು, ಉರ್ದು ಭಾಷೆಯ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಕೂಡ ಈ ವಿದ್ಯಾರ್ಥಿಗಳು ಕಲಿಯುವ ಶಾಲೆಗಳಲ್ಲಿ ಆಯಾ ಆ ಭಾಷೆಯ ಶಿಕ್ಷಕರನ್ನೇ ನೇಮಿಸಲಾಗುತ್ತದೆ. ಇಲ್ಲಿ ಸಾಧ್ಯವಾಗುವುದು ಕೇರಳದಲ್ಲಿ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ.

ಈ ಸಮಸ್ಯೆಗೆ ಪರಿಹಾರ ಏನು?

- ಈಗಾಗಲೇ ಇಬ್ಬರು ಮಲಯಾಳಿ ಭಾಷಿಕ ಶಿಕ್ಷಕರನ್ನು ವೇತನ ಸಹಿತ ಕನ್ನಡ ಕಲಿಯುವಂತೆ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆಗೆ ಕೇರಳ ಶಿಕ್ಷಣ ಇಲಾಖೆ ಕಳುಹಿಸಿದ ಜ್ವಲಂತ ನಿದರ್ಶನ ಇದೆ. ಇದೇ ರೀತಿ ಉಳಿದ ಶಿಕ್ಷಕರನ್ನೂ ಕನ್ನಡ ಕಲಿತು ಬರುವಂತೆ ಕಳುಹಿಸಲು ಸಾಧ್ಯವಿದೆ. ಆದರೆ ಇದು ಪ್ರತಿ ಬಾರಿಯೂ ಸಾಧ್ಯವೇ ಎಂದು ಕನ್ನಡ ಪರ ಸಂಘಟನೆಗಳು ಕೇಳುತ್ತವೆ.

- ಕನ್ನಡ ಕಲಿಯಲು ತೆರಳುವ ಶಿಕ್ಷಕರು ನಿಜವಾಗಿ ಕನ್ನಡ ಕಲಿತ ಬಗ್ಗೆ ಸರ್ಟಿಫಿಕೇಟ್‌ ತರಬೇಕು. ಅದು ಬಿಟ್ಟು ಯಾರದೋ ಪ್ರಭಾವ ಬಳಸಿ ಮತ್ತೆ ಸಂದರ್ಶನದಲ್ಲಿ ಉತ್ತೀರ್ಣರಾದಂತೆ ಕನ್ನಡ ಕಲಿಯದೆ ಕನ್ನಡ ಕಲಿಕೆ ಕೋರ್ಸ್‌ನಲ್ಲಿ ಪಾಸ್‌ ಆದರೆ ಸಮಸ್ಯೆ ಮತ್ತಷ್ಟುಬಿಗಡಾಯಿಸಬಹುದು.

- ಕನಿಷ್ಠ 10ನೇ ತರಗತಿವರೆಗೆ ಕನ್ನಡ ಕಲಿತವರು ಮಾತ್ರ ಕನ್ನಡ ಶಿಕ್ಷಕರಾಗಿ ನೇಮಕವಾಗುವುದನ್ನು ಕಡ್ಡಾಯ ಮಾಡಬೇಕು.

- ಈಗಾಗಲೇ ಕೇರಳದ ಕನ್ನಡ ಶಾಲೆಗಳಿಗೆ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕರನ್ನು ಮಲಯಾಳಿ ಮಾಧ್ಯಮ ಶಾಲೆಗಳಿಗೆ ವರ್ಗಾವಣೆ ಮಾಡಬೇಕು.

- ಕರ್ನಾಟಕ ಸರ್ಕಾರ ನೇರವಾಗಿ ಈ ವಿಷಯವನ್ನು ಕೇರಳ ಸರ್ಕಾರದ ಜೊತೆಗೆ ಕೈಗೆತ್ತಿಕೊಂಡರೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯುತ್ತದೆ.

- ಆತ್ಮಭೂಷಣ್ ಭಟ್ 

Follow Us:
Download App:
  • android
  • ios