ಬ್ಲ್ಯಾಕ್ ಫಂಗಸ್ ತಡೆಯೋದು ಹೇಗೆ?: ತಜ್ಞರು ಹೇಳಿದ್ದಿಷ್ಟು!
* ಬ್ಲ್ಯಾಕ್ ಫಂಗಸ್ ತಡೆಯೋದು ಹೇಗೆ?
* ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡುವುದೇ ಪರಿಹಾರ: ಸುಧಾಕರ್
* ತಜ್ಞರ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳ ಸಲ್ಲಿಕೆ
ಬೆಂಗಳೂರು(ಮೇ.25): ರಾಜ್ಯದಲ್ಲಿ ಉಂಟಾಗುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಮೂಲ ಹಾಗೂ ಪರಿಹಾರ ಕುರಿತು ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರನ್ನು ವಾರ್ಡ್‌ಗೆ ಬಿಡಬಾರದು, ಕಟ್ಟುನಿಟ್ಟಾಗಿ ಸ್ವಚ್ಛತೆ ಕಾಪಾಡಬೇಕು ಎಂಬ ಸಲಹೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಬ್ಲ್ಯಾಕ್ ಫಂಗಸ್‌ಗೆ ಮೂಲ ಕಾರಣ ಹಾಗೂ ಪರಿಹಾರಗಳನ್ನು ಸೂಚಿಸುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿತ್ತು ಎಂದರು.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!
ರಾಜ್ಯದಲ್ಲಿ ಉಂಟಾಗಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಸ್ಟೆರಾಯಿಡ್ ಬಳಕೆ ಜತೆಗೆ ಹ್ಯುಮಿಡಿಫೈಯರ್‌ನಲ್ಲಿ ಬಳಕೆ ಮಾಡಿರುವ ನೀರು, ಒಂದೇ ಮಾಸ್ಕ್ ದೀರ್ಘ ಕಾಲ ಬಳಕೆ, ಟ್ಯೂಬ್, ಹಾಸಿಗೆ, ಐಸಿಯು ವೆಂಟಿಲೇಟರನ್ನು ಮತ್ತೊಬ್ಬರಿಗೆ ಬಳಸುವುದು ಮೊದಲಾದ ಮೂಲಗಳಿಂದ ಸೋಂಕು ಬರುತ್ತಿದೆ ಎಂದು ಹೇಳಲಾಗಿದೆ. ಇದನ್ನು ತಡೆಯಲು ಸಹ ತಜ್ಞರು ಸಲಹೆಗಳನ್ನು ನೀಡಿದ್ದಾರೆ. ಕೊರೋನಾ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು. ಹೊರಗಿನವರು ವಾರ್ಡ್‌ಗೆ ಬರಬಾರದು. ಪ್ರತಿ ಪಾಳಿ ಮುಗಿದ ಮೇಲೆ ಆಸ್ಪತ್ರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು. ರೋಗಿಯ ಚಿಕಿತ್ಸೆಗೆ ಬಳಸುವ ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಇನ್ನು ಕೊರೋನಾದಿಂದ ಗುಣಮುಖರಾದವರಿಗೆ ಮೂರು ಬಾರಿ ಇಎನ್‌ಟಿ ವೈದ್ಯರು ತಪಾಸಣೆ ನಡೆಸಬೇಕು. ಗುಣಮುಖರಾದ 3, 7, 21ನೇ ದಿನ ತಪಾಸಣೆ ಮಾಡಬೇಕು ಎಂದು ಸಹ ಸಮಿತಿ ಸಲಹೆ ನೀಡಿದೆ ಎಂದರು.
300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ:
ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲಾ ್ಯಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. 17 ಮೆಡಿಕಲ್ ಕಾಲೇಜುಗಳಲ್ಲಿ ಕೂಡ ವ್ಯವಸ್ಥೆ ಇದೆ. ಆದರೆ ಔಷಧ ಸ್ವಲ್ಪ ಕೊರತೆ ಇದೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
20 ಸಾವಿರ ವಯಲ್‌ಗೆ ಬೇಡಿಕೆ:
ಇಡೀ ದೇಶದಲ್ಲಿ ವರ್ಷಕ್ಕೆ 100-200ರಷ್ಟು ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗುತ್ತಿದ್ದರು. ಈಗ ರಾಜ್ಯದಲ್ಲೇ 300ಕ್ಕೂ ಅಧಿಕ ಸೋಂಕಿತರಿದ್ದಾರೆ. ಹೀಗಾಗಿ ಔಷಧ ಕೊರತೆ ಕಂಡುಬರುತ್ತಿದೆ. ಈವರೆಗೆ ರಾಜ್ಯಕ್ಕೆ 1150 ವಯಲ್ ಔಷಧಿ ರಾಜ್ಯಕ್ಕೆ ದೊರೆತಿದ್ದು, ಇನ್ನೂ 20 ಸಾವಿರ ವಯಲ್‌ಗೆ ಬೇಡಿಕೆ ಇಟ್ಟಿದ್ದೇವೆ. ಇದೀಗ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದ್ದು ಸದ್ಯದಲ್ಲೇ 1 ಸಾವಿರಕ್ಕೂ ಅಧಿಕ ವಯಲ್‌ಗಳನ್ನು ಕಳುಹಿಸಿಕೊಡುವ ನಿರೀಕ್ಷೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ವೇತನ ಹೆಚ್ಚಳದ ಬಗ್ಗೆ ಚರ್ಚೆ:
ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ತಜ್ಞರು ಹೇಳಿದ್ದೇನು?
- ಒಂದೇ ಮಾಸ್ಕ್ ಸುದೀರ್ಘ ಬಳಕೆ, ಸ್ಟಿರಾಯ್ಡ್ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಬರಬಹುದು
- ಕೋವಿಡ್ ಆಸ್ಪತ್ರೆಗಳ ಕಟ್ಟಡ ನವೀಕರಣ ಕಾಮಗಾರಿ ಸದ್ಯಕ್ಕೆ ಬೇಡ
- ಆಸ್ಪತ್ರೆಯಲ್ಲಿ ಹೊರಗಿನವರನ್ನು ವಾರ್ಡ್‌ಗೆ ಬಿಡಬಾರದು, ಸ್ವಚ್ಛತೆ ಕಾಪಾಡಬೇಕು
- ಹಾಸಿಗೆ, ಟ್ಯೂಬ್, ವೆಂಟಿಲೇಟರ್ ಮತ್ತೊಬ್ಬರಿಗೆ ನೀಡುವ ಮುನ್ನ ಸ್ಯಾನಿಟೈಸ್ ಮಾಡಬೇಕು
- ಪ್ರತಿ ಪಾಳಿ ಮುಗಿದ ಮೇಲೆ ಆಸ್ಪತ್ರೆ ಸಂಪೂರ್ಣ ಸ್ವಚ್ಛಗೊಳಿಸಬೇಕು
- ಕೊರೋನಾದಿಂದ ಗುಣವಾದವರನ್ನು 3, 7, 21ನೇ ದಿನ ಇಎನ್‌ಟಿ ವೈದ್ಯರು ಪರೀಕ್ಷಿಸಬೇಕು
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona