ವಾಲ್ಮೀಕಿ ಕೇಸ್‌: ಬ್ಯಾಂಕ್‌ನಲ್ಲಿ ಹಣ ವರ್ಗ ಆಗಿದ್ದು ಹೇಗೆ?

‘ನಿಗಮದ ಖಾತೆಯನ್ನು ಪರಿಶೀಲಿಸಿದಾಗ ಸುಮಾರು 94.73 ಕೋಟಿ ರು. ಹಣ ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಆದರೆ, ಸಂಬಂಧಪಟ್ಟ ಬ್ಯಾಂಕಿನವರು ಈ ಹಣ ವರ್ಗಾವಣೆ ಸಂಬಂಧ ನಿಗಮದ ಅಧಿಕೃತ ಇ-ಮೇಲ್‌ಗೆ ಯಾವುದೇ ಸಂದೇಶ ಕಳುಹಿಸಿರುವುದಿಲ್ಲ. ಈ ಹಣ ವರ್ಗಾವಣೆ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಇದರಿಂದ ನಿಗಮಕ್ಕೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ’ ಎಂದು ತಿಳಿಸಿದ್ದಾರೆ.
 

How Money Transferred to the Bank of Valmiki Corporation Scam Case in Karnataka grg

ಬೆಂಗಳೂರು(ಮೇ.30):  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಬೇರೆ ಬ್ಯಾಂಕ್‌ ಖಾತೆಗಳಿಗೆ ಅಕ್ರಮವಾಗಿ 94.73 ಕೋಟಿ ರು. ಹಣ ವರ್ಗಾವಣೆ ಮಾಡಲಾಗಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರ್‌ ನೀಡಿದ ದೂರಿನನ್ವಯ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ದೂರಿನಲ್ಲಿ ಅಕ್ರಮ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ.

ದೂರಿನಲ್ಲಿ ಏನಿದೆ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರ್‌ ನೀಡಿದ ದೂರಿನ ಅನ್ವಯ, ‘ನಿಗಮವು ವಸಂತನಗರದ ಯೂನಿಯನ್‌ ಬ್ಯಾಂಕ್‌ ಇಂಡಿಯಾ ಶಾಖೆಯಲ್ಲಿ ಹೊಂದಿದ್ದ ಖಾತೆಯನ್ನು 2024ರ ಫೆ.19ರಂದು ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ನಿಗಮದ ಪರವಾಗಿ ಈ ಖಾತೆಯನ್ನು ನಿರ್ವಹಿಸಲು 2024 ಫೆ.26ರಂದು ಬ್ಯಾಂಕಿನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳ ಸಹಿ ಪಡೆದುಕೊಂಡಿದ್ದರು’.

ವಾಲ್ಮೀಕಿ ನಿಗಮ: ಬಹುಕೋಟಿ ಹಗರಣದ ಕಿಡಿಯೀಗ ಭುಗಿಲು..!

‘ನಂತರ 2024ರ ಮಾ.4ರಂದು 25 ಕೋಟಿ ರು., ಮಾ.6ರಂದು 25 ಕೋಟಿ ರು., ಮಾ.21ರಂದು 44 ಕೋಟಿ ರು., ಮಾ.22ರಂದು 33 ಕೋಟಿ ರು. ಹಾಗೂ ಮೇ 21ರಂದು 50 ಕೋಟಿ ರು. ಸೇರಿದಂತೆ ಒಟ್ಟು 187.33 ಕೋಟಿ ರು. ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ರಾಜ್ಯ ಖಜಾನೆ-2ರಿಂದ ನಿಗಮದ ಖಾತೆಗೆ ಜಮೆಯಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನಿಗಮ ಮತ್ತು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನಡುವೆ ಯಾವುದೇ ಮಾತುಕತೆ ಮತ್ತು ಪತ್ರ ವ್ಯವಹಾರ ನಡೆದಿರುವುದಿಲ್ಲ. ಬ್ಯಾಂಕಿನವರು ನಿಗಮದ ಅಧಿಕೃತ ವಿಳಾಸಕ್ಕೆ ಯಾವುದೇ ಚೆಕ್‌ ಬುಕ್‌ ಹಾಗೂ ಪಾಸ್‌ ಬುಕ್‌ಗಳನ್ನು ಕಳುಹಿಸಿರಲಿಲ್ಲ’ ಎಂದು ತಿಳಿಸಿದ್ದಾರೆ.

ಸಹಿ ನಕಲು ಮಾಡಿ ಹಣ ವರ್ಗಾವಣೆ:

ಮೇ 22ರಂದು ನಿಗಮದ ಅಧಿಕಾರಿಗಳು ಬ್ಯಾಂಕ್‌ಗೆ ತೆರಳಿ ಚೆಕ್‌ ಬುಕ್‌, ಪಾಸ್‌ ಬುಕ್‌ ಮತ್ತು ನಿಗಮದ ಖಾತೆಗೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ಕೇಳಿದಾಗ ಬ್ಯಾಂಕಿನವರು ನಿಗಮದ ವಿಳಾಸಕ್ಕೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಬಳಿಕ ನಿಗಮಕ್ಕೆ ಬಂದು ನೋಡಿದಾಗ ಬ್ಯಾಂಕಿನಿಂದ ಯಾವುದೇ ದಾಖಲಾತಿಗಳು ಬಂದಿರುವುದಿಲ್ಲ. ಬಳಿಕ ಪರಿಶೀಲನೆ ಮಾಡಿದಾಗ ನಿಗಮಕ್ಕೆ ಸಂಬಂಧಿಸಿದ ದಾಖಲಾತಿಗಳು, ಆರ್‌ಟಿಜಿಎಸ್‌ ಬೋರ್ಡ್‌ ರೆಸುಲ್ಯೂಷನ್‌ ಜತೆಗೆ ಸಹಿಯನ್ನು ನಕಲು ಮಾಡಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ’.

94.73 ಕೋಟಿ ರು. ಬೇರೆ ಖಾತೆಗಳಿಗೆ ವರ್ಗಾವಣೆ:

‘ನಿಗಮದ ಖಾತೆಯನ್ನು ಪರಿಶೀಲಿಸಿದಾಗ ಸುಮಾರು 94.73 ಕೋಟಿ ರು. ಹಣ ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಆದರೆ, ಸಂಬಂಧಪಟ್ಟ ಬ್ಯಾಂಕಿನವರು ಈ ಹಣ ವರ್ಗಾವಣೆ ಸಂಬಂಧ ನಿಗಮದ ಅಧಿಕೃತ ಇ-ಮೇಲ್‌ಗೆ ಯಾವುದೇ ಸಂದೇಶ ಕಳುಹಿಸಿರುವುದಿಲ್ಲ. ಈ ಹಣ ವರ್ಗಾವಣೆ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಇದರಿಂದ ನಿಗಮಕ್ಕೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ’ ಎಂದು ತಿಳಿಸಿದ್ದಾರೆ.

ಅಕ್ರಮದ ಬಗ್ಗೆ ತಿಳಿಸಿದ ಬಳಿಕ 5 ಕೋಟಿ ರು. ಖಾತೆಗೆ ವರ್ಗ:

‘ನಿಗಮದ ಲೆಕ್ಕ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರ್‌ ಅವರು ನಿಗಮದ ಬ್ಯಾಂಕ್‌ ದೃಢೀಕರಣ ಚೆಕ್‌, ಆರ್‌ಟಿಜಿಎಸ್‌, ಬ್ಯಾಂಕ್‌ ಹೇಳಿಕೆ ಇತ್ಯಾದಿಗಳನ್ನು ಸಮನ್ವಯಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಈಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೋಸದ ಚಟುವಟಿಕೆ ಮತ್ತು ಅಕ್ರಮ ಹಣ ವರ್ಗವಣೆ ಬಗ್ಗೆ ಮೇ 23ರಂದು ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಖ್ಯ ವ್ಯವಸ್ಥಾಪಕರಿಗೆ ವಿವರಿಸಿದ ಬಳಿಕ ಬ್ಯಾಂಕಿನವರು ನಿಗಮದ ಖಾತೆಗೆ 5 ಕೋಟಿ ರು. ಹಣ ಜಮೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಅಮಾನತು

‘ಈ ಅಕ್ರಮಗಳ ಸಂಬಂಧ ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಕೋರಲಾಗಿದೆ. ಆದರೆ, ಈವರೆಗೆ ಯಾವುದೇ ಸಿಸಿಟಿವಿ ದೃಶ್ಯಾವಳಿ ಒದಗಿಸಿಲ್ಲ. ಅಂತೆಯೆ ಮೇ 27ರಂದು ನಿಗಮಕ್ಕೆ ಸಂಬಂಧಿಸಿದ ಎಲ್ಲಾ ಮೊತ್ತವನ್ನು ಮರು ಠೇವಣಿ ಮಾಡಿ ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕ(ಪೂರ್ವ)ರಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ:

‘ನಿಗಮದ ಯಾವುದೇ ಅಧಿಕಾರಿಗಳ ಉಪಸ್ಥಿತಿ ಇಲ್ಲದೆ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಭೌತಿಕ ಪರಿಶೀಲನೆ ಇಲ್ಲದೆ ಹಣ ವರ್ಗಾವಣೆ ನಡೆಸಲಾಗಿದೆ. ಬ್ಯಾಂಕ್‌ನಿಂದ ಓವರ್‌ ಡ್ರಾಫ್ಟ್‌ ಸೌಲಭ್ಯ ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ನಿಗಮದ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗಿದೆ’.

ಸಮಗ್ರ ತನಿಖೆಯಾಗಬೇಕು: ‘ಈ ಅಕ್ರಮಕ್ಕೆ ಬ್ಯಾಂಕಿನ ಸಿಇಓ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರುಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಿಗಮದ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಬ್ಯಾಂಕಿನ ಈ ಉನ್ನತ ಆಡಳಿತ ವರ್ಗದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಎ.ರಾಜಶೇಖರ್‌ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios