ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಶಾಸಕ ಪೊನ್ನಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರವಿಲ್ಲದೆ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಳೆಗಾಲದ ಸಿದ್ಧತೆಗಳ ಬಗ್ಗೆಯೂ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೊಡಗು (ಜೂ.20): ಯಾವುದೇ ಮೀಸಲಾತಿ ಜಾರಿಯಾಗಬೇಕಾದರೆ ಅದು ಸಚಿವ ಸಂಪುಟದಲ್ಲಿ ನಿರ್ಧಾರವಾಗಬೇಕು. ಒಬ್ಬ ಮಂತ್ರಿಯ ಮಟ್ಟದಲ್ಲಿ ಅದು ನಿರ್ಧಾರವಾಗುವುದಕ್ಕೆ ಸಾಧ್ಯವಿಲ್ಲ. ಜಮೀರ್ ಅಹಮ್ಮದ್ ಖಾನ್ ಅವರು ಅದು ಹೇಗೆ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 15 ಪರ್ಸೆಂಟಿಗೆ ಹೆಚ್ಚಿಸಿದ್ದಾರೋ ಗೊತ್ತಿಲ್ಲ. ಇದನ್ನು ಹತ್ತಿರದಿಂದ ತಿಳಿದ ಬಳಿಕ ಮಾತನಾಡುತ್ತೇನೆ ಎಂದು ಸಿಎಂ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಪೊನ್ನಣ್ಣ ಹೇಳಿದ್ದಾರೆ.

ಕೊಡಗಿನ ಚೇರಂಬಾಣೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವೇನೇ ಮಾಡಿದರೂ ಬಿಜೆಪಿಯವರು ಆರೋಪ ಮಾಡುತ್ತಾರೆ, ಅದಕ್ಕೆ ನಾವು ಅದಕ್ಕೆ ಗಮನ ಕೊಡುವ ಅಗತ್ಯವಿಲ್ಲ. ಆದರೆ ಜಮೀರ್ ಅಹಮ್ಮದ್ ಖಾನ್ ಅವರು ಮೀಸಲಾತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅದು ಸಚಿವ ಸಂಪುಟದ ಮುಂದೆ ಬಂದು ಕ್ರಮ ಆಗಬೇಕಾಗುತ್ತದೆ ಎಂದಿದ್ದಾರೆ.

ನಾನಂತು ಹಾಗೆ ಯಾವುದೇ ಆದೇಶದ ಪ್ರತಿಯನ್ನು ನೋಡಿಲ್ಲ. ಕಳೆದ ಬಾರಿಯೂ ಮುಸ್ಲಿಂ ಮೀಸಲಾತಿ ಅಂತ ಊಹಾ ಪೋಹಗಳೇ ಹೆಚ್ಚಾದವು ಎಂದು ಹೇಳುವ ಮೂಲಕ ಈಗಲೂ ಊಹಾಪೋಹ ಹಬ್ಬಿಸಲಾಗುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿದರು. ಯಾವುದೇ ರೀತಿಯ ಮೀಸಲಾತಿ ಕೊಡುವಾಗ ಕಾನೂನಿನ ಪ್ರಕ್ರಿಯೆಗಳು ಇರುತ್ತವೆ. ನನಗೆ ಯಾರೋ ಇಷ್ಟ ಅಂತ ಮೀಸಲಾತಿ ಕೊಡುವುದಕ್ಕೆ ಆಗಲ್ಲ. ಸಂವಿಧಾನಕ್ಕೆ ಬದ್ಧವಾಗಿ ಎಲ್ಲಾ ಸರ್ಕಾರಗಳು ಕ್ರಮ ವಹಿಸಬೇಕು. ನಮ್ಮ ಸರ್ಕಾರವೂ ಕೂಡು ಅದೇ ರೀತಿ ಕ್ರಮ ವಹಿಸುತ್ತದೆ ಎಂದಿದ್ದಾರೆ.

ಇನ್ನು ಇದಕ್ಕೂ ಮೊದಲು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಮಡಿಕೇರಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಹಲವು ಗ್ರಾಮಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಆತಂಕದ ಹಿನ್ನೆಲೆಯಲ್ಲಿ 60 ಕುಟುಂಬಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮಳೆಗಾಲವನ್ನು ಎದುರಿಸುವ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಾಲ್ಲೂಕಿನ ಎಲ್ಲಾ ಅಧಿಕಾರಿಗಳ ಸಭೆ ನಡೆಸಿದರು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎದುರಾಗಬಹುದಾದ ಸಮಸ್ಯೆಗಳೇನು.? ಅವುಗಳನ್ನು ಎದುರಿಸಲು ನಡೆಸಿರುವ ಸಿದ್ಧತೆ ಏನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೊತೆಗೆ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದರೆ ಅಂತಹವುಗಳನ್ನು ಕೂಡಲೇ ಬಗೆಹರಿಸುವಂತೆ ಸೂಚಿಸಿದರು.

ಅದರಲ್ಲೂ ಪ್ರವಾಹ ಪೀಡಿತ ಮತ್ತು ಭೂಕುಸಿತದಂತಹ ವಿಕೋಪಗಳು ಎದುರಾಗುವ ಸಾಧ್ಯತೆ ಇರುವ ಪ್ರದೇಶಗಳಿಂದ ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಬಳಿಕ ಮಾತನಾಡಿದ ಅವರು ಈ 18 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರವಾಹ ಮತ್ತು ಭೂಕುಸಿತದಂತಹ ಸಮಸ್ಯೆ ಎದುರಿಸುವ ಪ್ರದೇಶಗಳಿಂದ 60 ಕುಟುಂಬಗಳನ್ನು ಸ್ಥಳಾಂತರ ಮಾಡಲು ಗುರುತ್ತಿಸಲಾಗಿದೆ. ಆ ಕುಟುಂಬಗಳಿಗೆ ಸುರಕ್ಷಿತವಾಗಿರುವ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆದು ರಕ್ಷಣೆ ನೀಡಲು ಸೂಚಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಒಂದೆರಡು ಕುಟುಂಬಗಳು ಅಷ್ಟೇ ಇದ್ದು, ಅವರನ್ನು ಕಾಳಜಿ ಕೇಂದ್ರ ತೆರೆದು ಅಲ್ಲಿಗೆ ಸ್ಥಳಾಂತರ ಮಾಡಲು ಸಾಧ್ಯವಾಗದ ಕುಟುಂಬಗಳನ್ನು ಅವರ ಸಂಬಂಧಿಕರು ಅಥವಾ ಸ್ನೇಹಿತರ ಮನೆಗಳಿಗೆ ತೆರಳುವಂತೆ ತಿಳಿಸಲಾಗಿದೆ. ಒಟ್ಟಿನಲ್ಲಿ ಮಳೆ ತೀವ್ರಗೊಳ್ಳುವ ಸಂದರ್ಭದಲ್ಲಿ ಜನ, ಜಾನುವಾರು ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಪೊನ್ನಣ್ಣ ಹೇಳಿದ್ದಾರೆ.

ಇನ್ನು ಮಡಿಕೇರಿ ತಾಲ್ಲೂಕಿನ ದೋಣಿಕಡವು ಪ್ರದೇಶದಲ್ಲಿ ಪ್ರತೀ ಸಾರಿ ಮಳೆ ತೀವ್ರಗೊಂಡಾಗಲೆಲ್ಲಾ ಪ್ರವಾಹದ ನೀರು ತುಂಬಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ಬೇಂಗೂರಿಗೆ ರಸ್ತೆ ಸಂಪರ್ಕಕ್ಕಾಗಿ ಕೂಡಲೇ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಪಂಚಾಯತ್ ರಾಜ್ ಎಂಜಿನಿಯರ್ಗಳಿಗೆ ಸೂಚಿಸಿದರು. ಸಭೆಯಲ್ಲಿ ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.