ಅಲ್ಪಸಂಖ್ಯಾತರ ವಸತಿ ಮೀಸಲಾತಿ ಹೆಚ್ಚಳದ ಕುರಿತು ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಮತ್ತು ಸಂವಿಧಾನ ವಿರೋಧಿ ನಿಲುವನ್ನು ಟೀಕಿಸಿದ್ದಾರೆ. ಮೀಸಲಾತಿ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು (ಜೂ.19): ರಾಜ್ಯ ಸರ್ಕಾರ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು 10%ನಿಂದ 15%ಕ್ಕೆ ಹೆಚ್ಚಿಸಲು ಮುಂದಾದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅಹಿಂದ’ದಲ್ಲಿ ‘ಹಿಂದ’ ಮಾಯವಾಯಿತೇ? ಇದು ಯಾವ ಸಾಮಾಜಿಕ ನ್ಯಾಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆರ್. ಅಶೋಕ್, 'ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಮುಂದುವರೆಸುತ್ತಿದೆ. ಗುತ್ತಿಗೆ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ನೀಡಿದ ಬಳಿಕ, ಈಗ ವಸತಿ ಯೋಜನೆಯಲ್ಲಿಯೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಎಂದು ಆರೋಪಿಸಿದ್ದಾರೆ.
ಧರ್ಮಾಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ:
ಧರ್ಮಾಧಾರಿತ ಮೀಸಲಾತಿ ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರೂ, ಈ ನಾಡದ್ರೋಹಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕರ್ನಾಟಕವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟಿದ್ದಾರೆ. ಇದು ಕಾಂಗ್ರೆಸ್‌ನ ಸಂವಿಧಾನ ವಿರೋಧಿ ಮನಸ್ಥಿತಿಗೆ ಸಾಕ್ಷಿ ಎಂದು ದೂರಿದ್ದಾರೆ.
ಈ ಸಂವಿಧಾನ ವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ ಮೀಸಲಾತಿ ಹೆಚ್ಚಳವನ್ನು ಹಿಂಪಡೆಯುವವರೆಗೆ ರಾಜ್ಯ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
