ಬೆಂಗಳೂರು (ಸೆ.14): ಪ್ರಧಾನಮಂತ್ರಿ ಆವಾಜ್‌ ಯೋಜನೆಯಡಿ ಅನರ್ಹರಿಗೆ ಮನೆ ನೀಡಿದ್ದ ಕೆಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ರಾಕ್ಷಸ ಪ್ರವೃತ್ತಿಯವರು ಎಂದು ಸಂಬೋಧಿಸಿದ್ದೇನೆ. ಈ ಮಾತಿನಿಂದ ಪ್ರಾಮಾಣಿಕ ಪಿಡಿಓಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ನಾನು ಯಾರಿಗಾದರೂ ಅಪಚಾರ ಮಾಡಿದ್ದರೆ ಅಥವಾ ತಪ್ಪಾಗಿ ನಡೆದುಕೊಂಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಭಾನುವಾರ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಈ ಮಾತಿನ ವಿರುದ್ಧ ಪಿಡಿಓಗಳು ಪ್ರತಿಭಟನೆ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ರತಿಭಟನೆ ಮಾಡಿದೆ ನಾನು ಹೆದರುವುದಿಲ್ಲ. ಅಪ್ರಾಮಾಣಿಕರಿಗೆ ಆ ಮಾತು ಹೇಳಿದ್ದೇನೆ. ಪ್ರಾಮಾಣಿಕವಾಗಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ಪಿಡಿಓಗಳಿಗೆ ಈ ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದರು.

ಜೂನ್‌ ವೇಳೆಗೆ ಮನೆ ನಿರ್ಮಾಣ ಆಗದಿದ್ದರೆ ಸಚಿವ ಸ್ಥಾನದಲ್ಲಿ ಇರಲ್ಲ: ಸೋಮಣ್ಣ ...

ಹಾಸನ ಜಿಲ್ಲೆ ಪ್ರಗತಿ ಪರಿಶೀಲನೆ ಸಭೆ ವೇಳೆ ಹಿರಿಯ ಶಾಸಕರಾದ ಎಚ್‌.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ ಹಾಗೂ ಶಿವಲಿಂಗೇಗೌಡ ಅವರು ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗೆ ಮನೆ ನೀಡುವ ವಿಚಾರದಲ್ಲಿ ಕೆಲ ಪಿಡಿಓಗಳು ಉಳ್ಳವರಿಗೆ ಮನೆ ನೀಡುತ್ತಿದ್ದಾರೆ. ಅರ್ಹರಿಗೆ ಮನೆ ನೀಡುವಂತೆ ಸೂಚಿಸಿದರೂ ತಮ್ಮ ಮಾತಿಗೆ ಮನ್ನಣೆ ಕೊಡುತ್ತಿಲ್ಲ. ಇಂತಹ ಪಿಡಿಓಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. 

ಕೆಲ ಪಿಡಿಓಗಳ ಈ ತಪ್ಪಿನ ಬಗ್ಗೆ ತಮ್ಮ ಗಮನಕ್ಕೂ ಬಂದಿದ್ದರಿಂದ ಅಂತಹ ಪಿಡಿಓಗಳನ್ನು ರಾಕ್ಷಸ ಪ್ರವೃತ್ತಿಯವರು ಎಂದು ನನ್ನದೇ ಭಾಷೆಯಲ್ಲಿ ಸಂಬೋಧಿಸಿದ್ದೆ. ಈ ಮಾತಿನಿಂದ ಪ್ರಾಮಾಣಿಕ ಪಿಡಿಓಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರ ನನ್ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.