ಬೆಂಗಳೂರು(ಸೆ.10): ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬಡವರಿಗೆ ಮನೆ ನೀಡುವ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 43 ಸಾವಿರ ಮನೆ ನಿರ್ಮಾಣ ನಡೆಯುತ್ತಿದ್ದು, ಜೂನ್‌ ಒಳಗಾಗಿ 25 ಸಾವಿರ ಮನೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬುಧವಾರ ಮನೆ ನಿರ್ಮಿಸಲಿರುವ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಭೂಮಿ ಮಂಜೂರಾತಿ ಹಾಗೂ ಹಸ್ತಾಂತರ ಕುರಿತು ಆಗಿರುವ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಒಟ್ಟಾರೆ ಮನೆ ನಿರ್ಮಾಣಕ್ಕೆ 900 ಎಕರೆ ಭೂಮಿ ದೊರೆತಿದೆ, ಕಂದಾಯ ಸಚಿವರ ಜೊತೆಗೂ ಈ ಸಂಬಂಧ ಮಾತುಕತೆ ನಡೆಸಲಾಗಿದೆ, ಬಡವರು, ಗುಡಿಸಲಿನಲ್ಲಿ ಇರುವವರಿಗೆ ಮನೆ ನೀಡಲಾಗುವುದು ಎಂದರು.

ಶೀಘ್ರ 35 ಸಾವಿರ ಮನೆ ಫಲಾನುಭವಿಗಳಿಗೆ ಹಸ್ತಾಂತರ: ಸೋಮಣ್ಣ

ಇಚ್ಛಾಶಕ್ತಿ ಇದ್ದರೆ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯ, ಜೂನ್‌ ಒಳಗೆ 25 ಸಾವಿರ ಮನೆಗಳನ್ನು ನಿರ್ಮಾಣ ಮಾಡದಿದ್ದರೆ ಸಚಿವ ಸ್ಥಾನದಲ್ಲಿ ಇರುವುದಿಲ್ಲ. ಅಧಿಕಾರಿಗಳು ಈ ಕೆಲಸ ಮಾಡದಿದ್ದರೆ ಅದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದರು.