ಜೇನು ಕುಟುಂಬ ಸಾಕಾಣಿಕೆ, ಗುಣಮಟ್ಟದ ಜೇನುತುಪ್ಪ ಉತ್ಪಾದನೆ ಮೂಲಕ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಧುಕೇಶ್ವರ ಹೆಗಡೆ ಅವರನ್ನು  ನರೇಂದ್ರ ಮೋದಿ ಮನ್‌ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದಾರೆ.

ಶಿರಸಿ (ಆ.1): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಜಂಟಿಯಾಗಿ ನೀಡುವ ‘ಉತ್ತರ ಕರ್ನಾಟಕ ಬಿಸಿನೆಸ್‌ ಅವಾರ್ಡ್‌’ಗೆ ಭಾಜನರಾಗಿರುವ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ ಸಾಧನೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ. ಮಧುಕೇಶ್ವರ ಹೆಗಡೆ ಕಾರ್ಯದ ಕುರಿತು ಮೋದಿ ಅವರು ‘ಮನ್‌ ಕಿ ಬಾತ್‌’ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೇನು ಕುಟುಂಬ ಸಾಕಾಣಿಕೆ, ಗುಣಮಟ್ಟದ ಜೇನುತುಪ್ಪ ಉತ್ಪಾದನೆ ಮೂಲಕ ಗುರುತಿಸಿಕೊಂಡಿರುವ ಶಿರಸಿ ತಾಲೂಕಿನ ತಾರಗೋಡು ಗ್ರಾಮದ ಮಧುಕೇಶ್ವರ ಹೆಗಡೆ ಅವರು 35 ವರ್ಷಗಳಿಂದ ಜೇನು ಕೃಷಿಯಲ್ಲಿ ಪಳಗಿದ್ದಾರೆ. ತಾರಗೋಡಿನ ಅವರ ಮನೆ ಸುತ್ತ, ಅಡಕೆ ತೋಟಗಳಲ್ಲಿ, ನೆಗ್ಗು ಪಂಚಾಯಿತಿಯ ಮತ್ತಿಗಾರಿನ ಅವರ ತೋಟ ಸೇರಿ ಅನೇಕ ಕಡೆ 1,500ಕ್ಕೂ ಅಧಿಕ ಜೇನು ಕುಟುಂಬಗಳನ್ನು ಅವರು ಸಾಕಿದ್ದಾರೆ. ಮಿತ್ರರು, ಪರಿಚಯಸ್ಥರ ಕೃಷಿ ಭೂಮಿಯಲ್ಲೂ ಅವರು ಜೇನು ಪೆಟ್ಟಿಗೆಗಳನ್ನಿಟ್ಟು ಅವರ ಕೃಷಿ ಆದಾಯ ಹೆಚ್ಚಿಸಲೂ ಕಾರಣರಾಗಿದ್ದಾರೆ. ಆರಂಭದಲ್ಲಿ ಸರ್ಕಾರದ ಸಹಾಯಧನದ ಲಾಭ ಪಡೆದು ಇದೀಗ ಯಶಸ್ವಿ ಜೇನು ಕೃಷಿಕರಾಗಿರುವ ಮಧುಕೇಶ್ವರ ಅವರ ಸಾಧನೆ ಇದೀಗ ಪ್ರಧಾನಿ ಶ್ಲಾಘನೆಗೂ ಪಾತ್ರವಾಗಿದೆ.

ಅನಿವಾರ್ಯವಾಗಿ 8ನೇ ತರಗತಿಗೇ ಶಾಲೆ ಬಿಟ್ಟಮಧುಕೇಶ್ವರ ಹೆಗಡೆ ಅವರು ಉದ್ಯಮಕ್ಕಿಳಿಯಲು ಬಂಡವಾಳ ಇಲ್ಲದ ಆ ದಿನಗಳಲ್ಲಿ ಕೃಷಿಯನ್ನೇ ಉದ್ಯಮವಾಗಿಸಿಕೊಳ್ಳುವ ಯತ್ನ ನಡೆಸಿದವರು. ಅಂಥ ಸ್ಥಿತಿಯಲ್ಲಿ ಅವರ ಕೈ ಹಿಡಿದಿದ್ದು ಜೇನು ಕೃಷಿ. ಜೇನು ಕುಟುಂಬವೊಂದರ ಸದಸ್ಯನಂತೆ ಜೇನು ಕೃಷಿಯ ತಂತ್ರಜ್ಞಾನಗಳನ್ನೆಲ್ಲ ಮಧುಕೇಶ್ವರ ಹೆಗಡೆ ತಮ್ಮದಾಗಿಸಿಕೊಂಡಿದ್ದಾರೆ.

ಇಂದು ವಾರ್ಷಿಕವಾಗಿ 4.5 ಟನ್‌ ಜೇನುತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಆಯಾ ವನಸ್ಪತಿ ಗಿಡಗಳ ಬಳಿಯೇ ಜೇನುಗೂಡು ಇಟ್ಟು ತುಳಸಿ, ಸೀಗೇಕಾಯಿ, ಆಮ್ಲ ಜೇನುತುಪ್ಪಗಳನ್ನು ಉತ್ಪಾದಿಸುವುದು ಇವರ ವಿಶೇಷ. ಔಷಧ ಉದ್ದೇಶಕ್ಕಾಗಿ ಅವರು ತಯಾರಿಸುವ ಈ ಗುಣಮಟ್ಟದ ಜೇನು ತುಪ್ಪಕ್ಕೆ ವಿಶೇಷ ಬೇಡಿಕೆ ಸಹ ಇದೆ. ಇವರ ಸಾಧನೆ ಗುರುತಿಸಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಉತ್ತರ ಕರ್ನಾಟಕ ಬಿಸಿನೆಸ್‌ ಅವಾರ್ಡ್‌’ ನೀಡಿ ಗೌರವಿಸಿತ್ತು.

ವಿಶ್ವದ ಗಮನ ಸೆಳೆದ ಬೆಂಗಳೂರಿನ ಶುಮ್ಮೆ ಟಾಯ್ಸ್, ಮೋದಿ ಶ್ಲಾಘನೆ

Mann Ki Baat ನಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಮೋದಿ ಶ್ಲಾಘನೆ