ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು ಲಕ್ಷಾಂತರ ರು. ಹಣ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇಬ್ಬರು ಪುಟ್ಟಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು (ಆ.15): ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು ಲಕ್ಷಾಂತರ ರು. ಹಣ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇಬ್ಬರು ಪುಟ್ಟಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೇ ಲೇಔಟ್‌ನ ನಂದನಾ (26), ಸನ್ನಿಧಿ (6), ಚಾರ್ವಿಕ್‌ (1) ನಾಪತ್ತೆಯಾದವರು. ಆ.8ರ ಸಂಜೆಯಿಂದ ಮೊಬೈಲ್‌ ಸ್ವಿಚ್‌್ಡ ಆಫ್‌ ಮಾಡಿಕೊಂಡು ‘ನನ್ನನ್ನು ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪತಿ ಕೆ.ಜೆ.ಅವಿನಾಶ್‌ ನೀಡಿದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿರುವ ಪೊಲೀಸರು, ಮಹಿಳೆ ಹಾಗೂ ಆಕೆಯ ಮಕ್ಕಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ: ದೂರುದಾರ ಅವಿನಾಶ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಂದನಾ ಮನೆಯಲ್ಲೇ ಇರುತ್ತಿದ್ದರು. ಕಳೆದ ಒಂದು ವರ್ಷದಿಂದ ನಂದನಾ ಮೊಬೈಲ್‌ನಲ್ಲಿ ಆನ್‌ಲೈನ್‌ ಲೂಡೋ ಗೇಮ್‌ ಆಡುತ್ತಿದ್ದರು. ಈ ಆಟಕ್ಕಾಗಿ ಮನೆಯಲ್ಲಿದ್ದ 50 ಸಾವಿರ ರು. ನಗದು ಹಾಗೂ 1.20 ಲಕ್ಷ ರು. ಮೌಲ್ಯದ ಚಿನ್ನಾಭರಣ ಅಡಮಾನವಿರಿಸಿ ಪಡೆದ ಹಣ ಹಾಗೂ ಸಂಬಂಧಿಕರಿಂದ ಪಡೆದ 1.75 ಲಕ್ಷ ರು. ಸಾಲ ಸೇರಿದಂತೆ ಒಟ್ಟು 3.45 ಲಕ್ಷ ರು. ಕಳೆದುಕೊಂಡಿದ್ದರು. ಈ ಬಗ್ಗೆ ತಿಂಗಳ ಹಿಂದೆ ಅವಿನಾಶ್‌ ಪ್ರಶ್ನೆ ಮಾಡಿದಾಗ, ‘ನಾನು ತಪ್ಪು ಮಾಡಿದ್ದೇನೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ’ ಎಂದು ನಂದನಾ ಹೇಳಿದ್ದಾರೆ. 

ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್‌

ಇದಾದ ಹೊರತಾಗಿಯೂ ಜು.19ರಂದು ಮತ್ತೆ 1.20 ಲಕ್ಷ ರು. ಮೌಲ್ಯದ ಚಿನ್ನಾಭರಣ ಅಡಮಾನವಿರಿಸಿ ಹಣ ಪಡೆದಿದ್ದಾರೆ. ಈ ವಿಷಯ ಪತಿಗೆ ಗೊತ್ತಾಗಿ ಅವರು ಪತ್ನಿಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಅದೇ ದಿನ ಸಂಜೆ ಸಂಜೆ 4.45ಕ್ಕೆ ಪತ್ನಿ ನಂದನಾ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌್ಡ ಆಫ್‌ ಬಂದಿದೆ. ತಕ್ಷಣ ಮನೆ ಬಳಿ ಬಂದು ತಮ್ಮ ಬಳಿಯಿಂದ ಕೀ ಬಳಸಿ ಮನೆ ಬೀಗ ತೆರೆದು ಮನೆ ಪ್ರವೇಶಿಸಿದ್ದಾರೆ. ಈ ವೇಳೆ ಮನೆಯ ಟೇಬಲ್‌ ಮೇಲೆ ‘ನನ್ನನ್ನು ದಯವಿಷ್ಟು ಕ್ಷಮಿಸಿಬಿಡಿ, ನಿಮ್ಮನ್ನು ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ನನ್ನಿಂದ ನಿಮಗೆ ಲಾಸ್‌ ಆಗಿದೆ. ಮನೆಯಲ್ಲಿರುವ ದುಡ್ಡು ತೆಗೆದುಕೊಂಡು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ’ ಎಂದು ಪತ್ರ ಬರೆದಿಟ್ಟಿರುವುದು ಕಂಡು ಬಂದಿದೆ.