ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ ಆರೋಪ ಎದುರಿಸುತ್ತಿರುವ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಭೇಟಿಯಾಗಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರಾಕರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು/ಬೆಳಗಾವಿ (ಜ.19): ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಡಿಜಿಪಿ ಶ್ರೇಣಿ ರಾಮಚಂದ್ರ ರಾವ್ ಅವರಿಗೆ ಈಗ ಸರ್ಕಾರದಿಂದ 'ಬಹಿಷ್ಕಾರ' ಶುರುವಾಗಿದೆ. ತಮ್ಮ ಮೇಲಿನ ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಬಂದಿದ್ದ ರಾಮಚಂದ್ರ ರಾವ್ ಅವರನ್ನು ಗೃಹ ಸಚಿವರು ಭೇಟಿಗೆ ನಿರಾಕರಿಸಿ, ಗೇಟ್‌ನಲ್ಲೇ ವಾಪಸ್ ಕಳಿಸಿದ್ದಾರೆ.
ಪರಮೇಶ್ವರ್ ಖಡಕ್ ನಿರ್ಧಾರ: ಭೇಟಿಗೆ ನಿರಾಕರಣೆ
ವಿಡಿಯೋ ವೈರಲ್ ಆದ ಬೆನ್ನಲ್ಲೇ ತೀವ್ರ ಮುಜುಗರಕ್ಕೊಳಗಾಗಿರುವ ಗೃಹ ಸಚಿವ ಪರಮೇಶ್ವರ್ ಅವರು, ಅಧಿಕಾರಿಯ ಭೇಟಿಗೆ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಗೃಹ ಸಚಿವರ ನಿವಾಸಕ್ಕೆ ಆಗಮಿಸಿದ್ದ ರಾಮಚಂದ್ರ ರಾವ್ ಅವರಿಗೆ 'ನಿಮ್ಮನ್ನು ಭೇಟಿ ಮಾಡಲು ಸಚಿವರು ಸಿದ್ಧರಿಲ್ಲ' ಎಂಬ ಸಂದೇಶ ರವಾನೆಯಾದಾಗ, ಗೇಟ್ ಬಳಿಯಿಂದಲೇ ಅವರು ನಿರಾಶರಾಗಿ ವಾಪಸ್ ತೆರಳಬೇಕಾಯಿತು. ಇಲಾಖೆಯ ಘನತೆ ಮಣ್ಣುಪಾಲು ಮಾಡಿದ ಅಧಿಕಾರಿಯ ಮುಖವನ್ನೂ ನೋಡಲು ಇಷ್ಟವಿಲ್ಲ ಎಂಬ ಕಠಿಣ ಸಂದೇಶವನ್ನು ಗೃಹ ಸಚಿವರು ಈ ಮೂಲಕ ರವಾನಿಸಿದ್ದಾರೆ.
ತಪ್ಪು ಮಾಡಿದ್ರೆ ಶಿಸ್ತಿನ ಕ್ರಮ: ಸಿಎಂ ಸಿದ್ದರಾಮಯ್ಯ
ಇತ್ತ ಬೆಳಗಾವಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಡಿಜಿಪಿ ರಾಮಚಂದ್ರ ರಾವ್ ಪ್ರಕರಣದ ಮಾಹಿತಿ ಬೆಳಗ್ಗೆಯೇ ನನ್ನ ಗಮನಕ್ಕೆ ಬಂದಿದೆ. ಈ ನಾಡಿನಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದ್ದರೆ ಯಾರನ್ನೇ ಆದರೂ ಬಿಡುವ ಪ್ರಶ್ನೆಯೇ ಇಲ್ಲ, ತಕ್ಷಣವೇ ಶಿಸ್ತಿನ ಕ್ರಮ ಜರುಗಿಸುತ್ತೇವೆ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ರಾಮಚಂದ್ರ ರಾವ್ ಅವರ ತಲೆದಂಡ ಬಹುತೇಕ ಖಚಿತವಾದಂತಿದೆ.
ಇದೆಲ್ಲಾ ಫ್ಯಾಬ್ರಿಕೇಟೆಡ್: ರಾಮಚಂದ್ರ ರಾವ್ ಪ್ರತಿಪಾದನೆ
ಭೇಟಿಗೆ ನಿರಾಕರಿಸಲ್ಪಟ್ಟ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಚಂದ್ರ ರಾವ್, 'ಇಂದಿನ ಕಾಲದಲ್ಲಿ ತಂತ್ರಜ್ಞಾನ ಬಳಸಿ ಏನ್ ಬೇಕಾದರೂ ಮಾಡುವ ಸಾಧ್ಯತೆ ಇದೆ. ಇದು ನನಗೂ ಶಾಕಿಂಗ್ ಆಗಿದೆ. ವಿಡಿಯೋ ಸುಳ್ಳು ಮತ್ತು ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ (ಸೃಷ್ಟಿಸಿದ್ದು). ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿದ್ದೆ, ಇದರ ಬಗ್ಗೆ ನಾನು ಅಡ್ವೊಕೇಟ್ ಜೊತೆ ಮಾತನಾಡುತ್ತೇನೆ. ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕು' ಎಂದು ತಮ್ಮನ್ನು ಸಮರ್ಥಿಸಿಕೊಂಡರು.
ಆದರೆ, ಸಿಎಂ ಮತ್ತು ಗೃಹ ಸಚಿವರ ನಿಲುವುಗಳನ್ನು ಗಮನಿಸಿದರೆ, ಸರ್ಕಾರವು ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದು ಬಾಕಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೊಲೀಸ್ ಇಲಾಖೆ ಮಾನ ಮತ್ತೊಮ್ಮೆ ಹರಾಜು
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ಗೃಹ ಸಚಿವ ಪರಮೇಶ್ವರ್ ಅವರ ಆಪ್ತ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಬಯಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. ಪೊಲೀಸ್ ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಮಹಿಳೆಯರೊಂದಿಗೆ ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ನೆರವು ನೀಡಿದ ಆರೋಪವೂ ಸಹ ಡಿಜಿಪಿ ರಾಮಚಂದ್ರ ರಾವ್ ಮೇಲಿತ್ತು. ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತ ಹಾಗೂ ಅಸಮರ್ಥ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಂದ ನಮ್ಮ ರಾಜ್ಯದ ಹೆಮ್ಮೆಯ ಪೊಲೀಸ್ ಇಲಾಖೆಯ ಮಾನ ಮತ್ತೊಮ್ಮೆ ಹರಾಜಾಗಿದೆ' ಎಂದು ಟ್ವೀಟ್ ಮಾಡಿದೆ.


