Asianet Suvarna News Asianet Suvarna News

ಹೋಂ ಗಾರ್ಡ್‌ಗಳನ್ನ ಕೆಲಸದಿಂದ ತೆಗೆಯಲ್ಲ: ಗೃಹ ಸಚಿವ ಬೊಮ್ಮಾಯಿ

ವಿವಿಧ ಇಲಾಖೆಗಳಿಗೆ ಇವರ ನಿಯೋಜನೆ: ಬೊಮ್ಮಾಯಿ| ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದವರು ನಿರಾಳ| ಜೂ.8 ರಿಂದ ಅನ್‌ಲಾಕ್‌-1 ಆರಂಭ| ಕೇಂದ್ರದ ಮಾರ್ಗಸೂಚಿಗಾಗಿ ಕಾಯುತ್ತಿದ್ದು, ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ಅನ್‌ಲಾಕ್‌ ಬಗ್ಗೆ ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದರ ಕುರಿತು ನಿರ್ಧಾರ|

Home Minister Basavaraj Bommai Talks Over Home Guards
Author
Bengaluru, First Published Jun 5, 2020, 7:27 AM IST

ಬೆಂಗಳೂರು(ಜೂ.05): ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಮೂರು ಸಾವಿರಕ್ಕೂ ಹೆಚ್ಚು ಹೋಂ ಗಾರ್ಡ್‌ಗಳನ್ನು ಸೇವೆಯಲ್ಲಿ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ವಿವಿಧ ಇಲಾಖೆಗಳಿಗೆ ನಿಯೋಜಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಪೊಲೀಸ್‌ ಇಲಾಖೆಯ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೋಂಗಾರ್ಡ್‌ಗಳು ಕೆಲಸ ಕಳೆದುಕೊಳ್ಳುವ ಭೀತಿಗೊಳಗಾಗುವುದು ಬೇಕಾಗಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೆಲಸದಲ್ಲಿ ಮುಂದುವರಿಸಲಾಗುವುದು. ಯಾವುದೇ ಆತಂಕಗೊಳಗಾಗದೆ ಹೋಂಗಾರ್ಡ್‌ಗಳು ತಮ್ಮ ಕೆಲಸವನ್ನು ಮಾಡಬಹುದು. ವಿವಿಧ ಇಲಾಖೆಗಳಿಗೆ ಅವರನ್ನು ನಿಯೋಜಿಸುವ ನಿರ್ಧಾರವನ್ನು ಮಾಡಲಾಗಿದೆ ಎಂದರು.

ರಾತ್ರಿ ಕರ್ಫ್ಯೂ ವೇಳೆ ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ

ಕೋವಿಡ್‌ ವಿರುದ್ಧ ಕಾರ್ಯಾಚರಣೆಯಲ್ಲಿ ಗೃಹ ಇಲಾಖೆ, ಪೊಲೀಸ್‌ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಮಾಡಿರುವ ಕೆಲಸವನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿದೇಶದಿಂದ ಬಂದವರ ತಪಾಸಣೆ, ತಬ್ಲಿಘಿ-ಜಮಾತ್‌ ಸದಸ್ಯರ ಕ್ವಾರಂಟೈನ್‌ ಮಾಡಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ತಪಾಸಣೆ ನಡೆಸುವಲ್ಲಿ ಗೃಹ ಇಲಾಖೆ ಯಶಸ್ವಿಯಾಗಿದೆ. ಹೀಗಾಗಿ ಮೊದಲ ಮತ್ತು ಎರಡನೇ ಹಂತದ ಕೋವಿಡ್‌ ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು. ಇದಕ್ಕೆ ಪೊಲೀಸ್‌ ಇಲಾಖೆ ಕಾರಣವಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಾರ್ಯ ಮತ್ತು ವಲಸೆ ಕಾರ್ಮಿಕರನ್ನು ವಾಪಸ್‌ ಕಳುಹಿಸಿಕೊಡುವಲ್ಲಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದರು.

ಪೊಲೀಸ್‌ ವಸತಿ ಯೋಜನೆಗೆ ಬಜೆಟ್‌ನಲ್ಲಿ ಅನುಮೋದನೆ ನೀಡಿದಂತೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಐದು ವರ್ಷದ ಯೊಜನೆ ಇದಾಗಿದೆ. ಮೊದಲ ಹಂತದ ಯೋಜನೆ ಜಾರಿಗೆ ಮೂರು ಸಾವಿರ ಕೋಟಿ ರು. ಅಗತ್ಯ ಇದೆ. ಅಗ್ನಿ ಶಾಮಕದಳದ ಕೆಲ ಬೇಡಿಕೆಗನುಗುಣವಾಗಿ 140 ಕೋಟಿ ರು. ಅನುಮೋದನೆ ನೀಡಿದ್ದಾರೆ. ಚಾಲ್ತಿಯಲ್ಲಿರುವ ಕಾರ್ಯಕ್ರಮಕ್ಕೆ ಹಣ ಒದಗಿಸಲು ಕೇಳಿದ್ದೇವೆ. ಪೊಲೀಸ್‌ ಕವಚದಂತಹ ಯೋಜನೆಗೆ ಹಣಕಾಸು ಕಡಿತ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿದ್ದಾರೆ ಎಂದರು.

ಹೊಂ ಕ್ವಾರಂಟೈನ್‌ ನೋಡಿಕೊಳ್ಳುವ ಜವಾಬ್ದಾರಿ ಈಗ ಪೊಲೀಸರ ಮೇಲೆ ಬಿದ್ದಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಜೂ.8ರಿಂದ ಅನ್‌ಲಾಕ್‌-1 ಆರಂಭಗೊಳ್ಳಲಿದೆ. ಕೇಂದ್ರದ ಮಾರ್ಗಸೂಚಿಗಾಗಿ ಕಾಯುತ್ತಿದ್ದು, ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ಅನ್‌ಲಾಕ್‌ ಬಗ್ಗೆ ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
 

Follow Us:
Download App:
  • android
  • ios