ಸಂಕಷ್ಟವಿದ್ದರೂ ಉತ್ತಮ ಆಡಳಿತ: ಬಸವರಾಜ ಬೊಮ್ಮಾಯಿ
ಸಂಕಷ್ಟದ ನಡುವೆಯೂ ನಮ್ಮ ಸರ್ಕಾರ ಉತ್ತಮ ಆಡಳಿತ| ಹಾಲು ಉತ್ಪಾದನೆ, ಕೈಗಾರಿಕಾ ಕ್ಷೇತ್ರದಲ್ಲಿ ನಾವೇ ನಂ.2| ನಮ್ಮ ಸರ್ಕಾರರಿಂದ ಸುಮಾರು 25 ಸಾವಿರ ಕಿ.ಮೀ. ಹಳ್ಳಿ ರಸ್ತೆ, ಜಿಲ್ಲಾ ಮುಖ್ಯರಸ್ತೆ ಮೇಲ್ದರ್ಜೆಗೆ: ಬಸವರಾಜ ಬೊಮ್ಮಾಯಿ|
ಬೆಂಗಳೂರು(ಫೆ.10): ಭೀಕರ ನೆರೆ, ಬರ ಪರಿಸ್ಥಿತಿ, ಕೋವಿಡ್ ಲಾಕ್‌ಡೌನ್‌ನಂತಹ ಆರ್ಥಿಕ ಸಂಕಷ್ಟದ ನಡುವೆಯೂ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಈಗಾಗಲೇ ಬಹುತೇಕ ಇಲಾಖೆಗಳಲ್ಲಿ ಶೇ.60 ರಿಂದ 70ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೋ ಹತ್ಯೆ ನಿಷೇಧ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಿದ ನಿರ್ಣಯವನ್ನು ಮರು ಪರಿಶೀಲಿಸುವಂತೆ ಮಂಗಳವಾರ ಇಡೀ ದಿನ ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾಗ ಸಭಾಪತಿಗಳ ಸೂಚನೆಯಂತೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಬೊಮ್ಮಾಯಿ ಅವರು ಉತ್ತರ ನೀಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ 126 ತಾಲೂಕುಗಳಲ್ಲಿ ಬರಗಾಲ ಇತ್ತು. ಈ ಪರಿಸ್ಥಿತಿಯನ್ನು ನಿಭಾಯಿಸುವ ಕಾಲಕ್ಕೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಯಿತು. ಆಗ ಕಾರಣಾಂತರದಿಂದ ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ನೆರೆ ಜಿಲ್ಲೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ, ರಕ್ಷಣೆ, ಪರಿಹಾರ ಕಾರ್ಯಗಳನ್ನು ನಿರ್ವಹಿಸಿದರು. ನೆರೆಯಿಂದ ಬೀದಿ ಪಾಲಾದ ಜನರ ರಕ್ಷಣೆಗೆ 1465 ಪುನರ್ವಸತಿ ಕೇಂದ್ರ ಆರಂಭಿಸಿ, 4.91 ಲಕ್ಷ ಜನರಿಗೆ ಆಶ್ರಯ ನೀಡಲಾಯಿತು. 2.7 ಲಕ್ಷ ಕುಟುಂಬಕ್ಕೆ ತಲಾ 10 ಸಾವಿರ ರು. ಪರಿಹಾರ, ನೆರೆ ಜಿಲ್ಲೆಗಳಿಗೆ 914 ಕೋಟಿ ರು. ಹಣ ಬಿಡುಗಡೆ ಮಾಡಲಾಯಿತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದಲೂ ರೈತರಿಗೆ 4 ಸಾವಿರ ರು. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೊಮ್ಮಾಯಿಯಿಂದ ಗೃಹ ಖಾತೆ ವಾಪಸ್ ಪಡೆಯಲಿ : ಸ್ವಾಮೀಜಿ
ಮಾಸ್ಕ್, ವೆಂಟಿಲೇಟರ್, ಔಷಧಿ, ಟೆಸ್ಟ್ ಕಿಟ್ ಇತರೆ ಉಪಕರಣಗಳ ಖರೀದಿ ಹಾಗೂ ತಜ್ಞ ವೈದ್ಯರ ನೇಮಕಕ್ಕಾಗಿ 2236 ಕೋಟಿ ರು. ಹೆಚ್ಚುವರಿ ಅನುದಾನ, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ 2096 ಕೋಟಿ ರು. ಪ್ಯಾಕೇಜ್ ಸೇರಿದಂತೆ ಒಟ್ಟಾರೆ ಕೋವಿಡ್ ಪರಿಸ್ಥಿತಿ ನಿಭಾಯಿಸಲು 4331 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಸದನಕ್ಕೆ ಉತ್ತರ ನೀಡಿದರು.
ನಮ್ಮ ಸರ್ಕಾರ ಸುಮಾರು 25 ಸಾವಿರ ಕಿ.ಮೀ. ಹಳ್ಳಿ ರಸ್ತೆ, ಜಿಲ್ಲಾ ಮುಖ್ಯರಸ್ತೆ ಮೇಲ್ದರ್ಜೆಗೇರಿಸಿದೆ. ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ಇಂಧನ ಕ್ಷೇತ್ರದಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ. ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ದೇಶದ ನಂ.2 ರಾಜ್ಯವಾಗಿ ಹೊರಹೊಮ್ಮಿದೆ. ವಸತಿ ಇಲಾಖೆಯಲ್ಲಿ ನಮ್ಮ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗದಿಂದ ಒಟ್ಟು 1.59 ಲಕ್ಷ ಮನೆಗಳು ನಿರ್ಮಾಣ ಮಾಡಿದೆ. ವಾಸ್ತವಿಕವಾಗಿ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ 10,194 ಕೋಟಿ ರು. ಅನುದಾನವನ್ನು ಮುಂದಿನ ಮೂರು ವರ್ಷದಲ್ಲಿ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.