ಬೆಂಗಳೂರು(ಅ.23): ರಾಜ್ಯ ಪೊಲೀಸ್‌ ಇಲಾಖೆಯ ಆಮೂಲಾಗ್ರ ಬದಲಾವಣೆಗೆ ಮೊದಲ ಬಾರಿಗೆ ಸರ್ಕಾರ ನಿರ್ಧರಿಸಿದೆ. ಈ ಸಲುವಾಗಿ ಪೊಲೀಸ್‌ ಮಹಾನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪೊಲೀಸ್‌ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ಪೊಲೀಸ್‌ ಇಲಾಖೆ ಆಯೋಜಿಸಿದ್ದ ‘ಸ್ಮರಣಾಂಜಲಿ’ ಪೊಲೀಸ್‌ ಅಮರವೀರರ ಭಾವಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದರು.

ಇದುವರೆಗೆ ರಾಜ್ಯ ಪೊಲೀಸ್‌ ಇಲಾಖೆಯ ಪುನಾರಚನೆಯಾಗಿಲ್ಲ. ಹಳೆಯ ವ್ಯವಸ್ಥೆಯೇ ಮುಂದುವರೆದಿದೆ. ಹೀಗಾಗಿ ಇಲಾಖೆಯಲ್ಲಿ ಬದಲಾವಣೆಗೆ ಯೋಜಿಸಲಾಗಿದೆ. ಇದೇ ಪ್ರಥಮ ಬಾರಿಗೆ ಡಿಜಿಪಿ ಪ್ರವೀಣ್‌ ಸೂದ್‌ ನೇತೃತ್ವದಲ್ಲಿ ಸುಧಾರಣಾ ಸಮಿತಿ ರಚಿಸಲಾಗಿದೆ. ಪೊಲೀಸರು ಮತ್ತು ಅವರ ಕುಟುಂಬದ ಸಂರಕ್ಷಣೆ ಹಾಗೂ ಸಾಮಾಜಿಕ ಬದುಕಿನ ಭದ್ರತೆ ದೃಷ್ಟಿಯಿಟ್ಟುಕೊಂಡು ಸುಧಾರಣಾ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರದ ಬಳಿ 11,432 ಕೋಟಿ ಜಿಎಸ್‌ಟಿ ಬಾಕಿ ಕೇಳಿದ ಬೊಮ್ಮಾಯಿ

ಕೊರೋನಾ ಹೋರಾಟದಲ್ಲಿ ಪೊಲೀಸರ ನಾಯಕರು. ಹಿರಿಯ ಸಚಿವರ ಸಭೆಯಲ್ಲೇ ನಿಜವಾದ ಕೊರೋನಾ ವಾರಿಯ​ರ್‍ಸ್ಗಳೆಂದರೆ ಅದೂ ಪೊಲೀಸರು ಎಂದು ಹೆಮ್ಮೆಯಿಂದ ಹೇಳಿದ್ದೇನೆ. ಕೊರೋನಾ ಕೆಲಸದಲ್ಲಿ ತೊಡಗುವ ಆಶಾ ಕಾರ್ಯಕರ್ತ ರಕ್ಷಣೆ, ರೋಗಿಗಳ ಆಸ್ಪತ್ರೆಗೆ ಸ್ಥಳಾಂತರ ಹೀಗೆ ಪ್ರತಿಯೊಂದ ಕಾರ್ಯದಲ್ಲೂ ಮುಂಚೂಣಿಯಲ್ಲಿ ನಿಂತು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೊರೋನಾ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ .30 ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿಗಳು ಮುಕ್ತ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು ಎಂದು ಹೇಳಿದರು.

ಸಂಸ್ಮರಣಾ ಸ್ಮಾರಕ ಭವನ ನಿರ್ಮಾಣ:

ಕೊರೋನಾ ಹೋರಾಟದಲ್ಲಿ ಮಡಿದ ಪೊಲೀಸರ ನೆನಪಿಗೆ ಸೈನ್ಯದ ಮಾದರಿಯಲ್ಲೇ ಸಂಸ್ಮರಣಾ ಸ್ಮಾರಕ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ಸೂಕ್ತ ಜಾಗ ಗುರುತಿಸುವ ಕೆಲಸ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಸೈನ್ಯದಂತೆ ಅತ್ಯಂತ ಶಿಸ್ತು ಬದ್ಧ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುವ ಪೊಲೀಸ್‌ ಇಲಾಖೆಯಾಗಿದೆ. ಹಗಲಿರುಳು ಎನ್ನದೆ ಸಮಾಜಕ್ಕಾಗಿ ಪೊಲೀಸರು ದುಡಿಯುತ್ತಾರೆ. ಲಾಕ್‌ಡೌನ್‌ ವೇಳೆ ನಡುರಾತ್ರಿ 2 ಗಂಟೆಗೆ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ನಾನು ಖುದ್ದು ಪರಿಶೀಲಿಸಿದ್ದೇನೆ. ಲಾಕ್‌ಡೌನ್‌ ವೇಳೆ ಪೊಲೀಸರು ಸಾವಿರಾರು ಜನರ ಹಸಿವು ನೀಗಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

185 ಸಾವು, 9 ಸಾವಿರ ಪೊಲೀಸರಿಗೆ ಸೋಂಕು:

ಕೊರೋನಾ ವೇಳೆ ಪೊಲೀಸರು ಕುಟುಂಬದ ಒತ್ತಡ ಹಾಗೂ ಭಯದ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದುವರೆಗೆ 85 ಪೊಲೀಸರು ಕೊರೋನಾಗೆ ಬಲಿಯಾಗಿದ್ದಾರೆ. ಇತರೆ ಕಾರಣಗಳಿಂದ 100 ಜನರು ಒಟ್ಟು ಪ್ರಸಕ್ತ ವರ್ಷ 185 ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. 9 ಸಾವಿರ ಪೊಲೀಸರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೂ ಎದೆಗುಂದದೆ ಕರ್ತವ್ಯ ನಿಷ್ಠೆ ಮೆರೆದಿರುವುದು ಹೆಮ್ಮೆ ಮತ್ತು ಗೌರವ ತಂದಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅಭಿಮಾನದಿಂದ ನುಡಿದರು.

ಈ ಸಂದರ್ಭದಲ್ಲಿ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಆಯುಕ್ತ ಕಮಲ್‌ ಪಂತ್‌ ಹಾಗೂ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಉಪಸ್ಥಿತರಿದ್ದರು.