ಹರ್ಷ ಹತ್ಯೆ ಹಂತಕರ ಮೋಜು-ಮಸ್ತಿ: ಪರಪ್ಪನ ಅಗ್ರಹಾರ ಜೈಲಿಗೆ ಆರಗ ಜ್ಞಾನೇಂದ್ರ ದಿಢೀರ್ ಭೇಟಿ
ಹರ್ಷನ ಕೊಲೆ ಕೇಸ್‌ನ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡೇ ಮೋಜು ಮಸ್ತಿ ಮಾಡಿರುವ ವಿಡೀಯೋಗಳ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವರದಿ : ಟಿ.ಮಂಜುನಾಥ, ಹೆಬ್ಬಗೋಡಿ
ಬೆಂಗಳೂರು, (ಜುಲೈ.12): ಸದಾ ಒಂದಿಲ್ಲೊಂದು ಅಕ್ರಮದ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಜೈಲಿನಲ್ಲಿನ ಕೈದಿಗಳು ಹಣ ನೀಡಿ ತಮಗೆ ಬೇಕಾದ ಹಾಗೆ ಐಷಾರಾಮಿ ಜೀವನ ನಡೆಸುತ್ತಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವಂತಹ ಆರೋಪಗಳು ಪದೇ ಪದೇ ಕೇಳಿ ಬಂದಿದ್ದವು.
ಅಲ್ಲದೆ ಕಳೆದ ಕೆಲ ದಿನಗಳ ಹಿಂದೆ ಹರ್ಷನ ಕೊಲೆ ಕೇಸ್‌ನ ಆರೋಪಿಗಳು ಜೈಲಿನಲ್ಲಿ ಮೋಜು ಮಸ್ತಿ ಮಾಡಿರುವ ವಿಡೀಯೋಗಳ ವೈರಲ್ ಆಗಿದ್ದು, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸುವರ್ಣನ್ಯೂಸ್ ವಿಸ್ತ್ರತ ವರದಿ ಪ್ರಸಾರದ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಹರ್ಷ ಹಂತಕರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ, ಜೋರಾಗಿದೆ ಮೋಜು-ಮಸ್ತಿ
ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ಕೊಟ್ಟ ಗೃಹ ಸಚಿವ
ಜೈಲಿನಲ್ಲಿ ಪದೇ ಪದೇ ಅಕ್ರಮದ ಬಗ್ಗೆ ವರದಿ ಆಗ್ತಾ ಇದ್ರೂ ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು. ಅಲ್ಲದೆ ಇತ್ತೀಚೆಗೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳು ಜೈಲಿನಲ್ಲಿ ಮೊಬೈಲ್ ಉಪಯೋಗಿಸಿ ತಮ್ಮ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿದ್ದ ವಿಡಿಯೋಗಳು ಸಹ ಬಾರಿ ಸದ್ದು ಮಾಡುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ವಿಸಿಟ್ ಕೊಡುವ ಮೂಲಕ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇಂದು(ಮಂಗಳವಾರ) ಜೈಲಿಗೆ ಎಂಟ್ರಿ ಕೊಟ್ಟ ಗೃಹ ಸಚಿವರು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯನ್ನ ಪಡೆದುಕೊಂಡರು. ಜೈಲಿನ ಆಸ್ಪತ್ರೆ, ಸಜಾ ಬಂಧಿಗಳ ಬ್ಯಾರಕ್, ಆಡುಗೆ ಕೋಣೆ ಸೇರಿದಂತೆ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿ ಯಾವುದೇ ಅಕ್ರಮಗಳು ನಡೆಯದಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಹಿಂದೆಯಿಂದಲೂ ಎಷ್ಟೇ ಕಠಿಣ ಕ್ರಮ ಕೈಗೊಂಡರು ಅಕ್ರಮ ಮಾತ್ರ ನಿಲ್ಲುತ್ತಿಲ್ಲ, ಮೊಬೈಲ್ ಬಳಕೆ ಮಾಡಿ ಜೈಲಿನಿಂದಲೇ ಧಮ್ಕಿ ಹಾಕೋದು, ಗಾಂಜಾ ಸೇವನೆ, ಸೇರಿದಂತೆ ಅನೇಕ ಸ್ಕೆಚ್ ಜೈಲಿನೊಳಗಡೆಯಿಂದ ನಡೆಯುತ್ತಿವೆ. ಹೀಗಾಗಿ ಇದಕ್ಕೆ ಮುಖ್ಯ ಕಾರಣ ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡೆಯಾಗಿದ್ದು ಈಗಾಗಲೇ ಮುರುಗನ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಅಕ್ರಮದಲ್ಲಿ ಭಾಗಿಯಾಗಿದ್ದ ಒಟ್ಟು15 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನ ಸಸ್ಪೆಂಡ್ ಮಾಡಲಾಗಿದ್ದು, 20 ಜನರನ್ನ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ಜೈಲಿನಲ್ಲಿ ಸಂಪೂರ್ಣ ಎಲ್ಲಾ ಹೊಸ ಅಧಿಕಾರಿ ಸಿಬ್ಬಂದಿ ವರ್ಗದವರಿದ್ದಾರೆ. ಜೊತೆಗೆ ಜೈಲಿನೊಳಗಡೆ 4 ಜಿ ಜಾಮರ್ ಅಳವಡಿಕೆ ಮಾಡಲಾಗುತ್ತಿದ್ದು, ಜೈಲಿನ ಮುಖ್ಯ ಸಿಬ್ಬಂದಿಗೆ ಬಾಡಿ ಕ್ಯಾಮರಾ ಅಳವಿಡಿಸುವ ಯೋಚನೆ ನಡೆದಿದೆ. ಹಾಗೆಯೇ ಯಾವುದಾದ್ರೂ ಕೈದಿ ಮೊಬೈಲ್ ಬಳಕೆ ಮಾಡುವುದರ ಬಗ್ಗೆ ಬೇರೊಬ್ಬ ಕೈದಿ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ರೆ ಅವನಿಗೆ ಎರಡು ಸಾವಿರ ರೂಪಾಯಿ ಬಹುಮಾನ, ಹಾಗೂ ಅವನ ಶಿಕ್ಷೆ ಕುರಿತಂತೆ ಯೋಚನೆ ಮಾಡಲಾಗುವುದು ಹಾಗೂ ಸಿಕ್ಕಿ ಬಿದ್ದ ಕೈದಿಗೆ ಆತನ ಮೊದಲಿದ್ದ ಶಿಕ್ಷೆಯ ಜೊತೆಗೆ ಮೊಬೈಲ್ ಬಳಕೆ ಕೇಸ್ ಆಧಾರದ ಮೇಲೆ ಮತ್ತಿಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟಿನಲ್ಲಿ ಸರ್ಕಾರಕ್ಕೆ ಮುಜುಗರ ತರುವ ಹಾಗೆ ಯಾವ ಅಧಿಕಾರಿಯೂ ನಡೆದುಕೊಳ್ಳಬಾರದು ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆ ನಡೆಯಬಾರದು ಎಂದು ಖಡಕ್ ಆಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾರ್ನಿಂಗ್ ಮಾಡಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಅಧಿಕಾರಿ ವರ್ಗ, ನ್ಯಾಯಾಧೀಶರು, ಸಚಿವರುಗಳು ಜೈಲಿನಲ್ಲಿ ಅಕ್ರಮಗಳು ಕೇಳಿ ಬಂದಾಗ ದಾಳಿ ನಡೆಸಿದರು ಇದುವರೆಗೂ ಜೈಲಿನ ಅಕ್ರಮಕ್ಕೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲ. ಇನ್ನಾದ್ರು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕುವಲ್ಲಿ ಸರ್ಕಾರ ಹಾಗೂ ಅಧಿಕಾರಿ ವರ್ಗ ಮುಂದಾಗುತ್ತಾರ ಕಾದು ನೋಡಬೇಕಿದೆ.