ಪಹಲ್ಗಾಮ್ ದಾಳಿ ಖಂಡಿಸಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮತ್ತೊಂದು ಕೇಸ್ ದಾಖಲು?

ಪುತ್ತೂರು: ಪಹಲ್ಗಾಮ್ ದಾಳಿ ಖಂಡಿಸಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮತ್ತೊಂದು ಕೇಸ್ ದಾಖಲುಗೊಂಡ ಬಗ್ಗೆ ವರದಿಯಾಗಿದೆ.

ಪುತ್ತೂರಿನ ಬಿಜೆಪಿ ಮುಖಂಡ, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ದ.ಕ. ಜಿಲ್ಲೆಯಿಂದ ಗಡಿಪಾರು ಮಾಡುವ ಸಂಬಂಧ ಉಪ ವಿಭಾಗದ ದಂಡಾಧಿಕಾರಿ ಮೂಲಕ ವಿಚಾರಣೆಗೆ ಹಾಜರಾಗಲು ಈಗಾಗಲೇ ನೋಟಿಸ್ ಜಾರಿಯಾಗಿದೆ.

ಇದೀಗ ಮಂಗಳವಾರ ಪುತ್ತೂರು ಪೊಲೀಸರಿಂದ ಮತ್ತೊಂದು ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆಯು 2025ರ ಎ. 30ರಂದು ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಅರ್ಜಿ (Petition) ಗೆ ಸಂಬಂಧಿಸಿದಂತೆ, ತನ್ನ ಹೇಳಿಕೆಯನ್ನು ನೀಡಲು ಅರುಣ್‌ ಕುಮಾರ್‌ ಪುತ್ತಿಲ ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿರುತ್ತಾರೆ ಹಾಗೂ ತನ್ನ ಹೇಳಿಕೆಯನ್ನು ದಾಖಲಿಸಿ ತೆರಳಿರುತ್ತಾರೆ. ಅವರ ವಿರುದ್ಧ ಯಾವುದೇ ಹೊಸ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.