ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಗಡಿಪಾರು ನೋಟಿಸ್ ಜಾರಿ. ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ಭೇಟಿ, ಮಾಹಿತಿ ಸಂಗ್ರಹಕ್ಕೆ ಆಕ್ರೋಶ. ವಿಎಚ್‌ಪಿ ಸೇರಿದಂತೆ ಹಿಂದೂ ಸಂಘಟನೆಗಳಿಂದ ಖಂಡನೆ.

ಮಂಗಳೂರು (ಜೂ.2): ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಕರ್ನಾಟಕ ಪೊಲೀಸ್ ಅಧಿನಿಯಮ, 1963ರ ಕಲಂ 58ರ ಅಡಿಯಲ್ಲಿ ಗಡಿಪಾರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ನೋಟಿಸ್ ಪ್ರಕಾರ, ಅರುಣ್ ಪುತ್ತಿಲ್ ಅವರು ಜೂನ್ 6, 2025ರಂದು ವಿಚಾರಣೆಗೆ ಹಾಜರಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಬಗ್ಗೆ ಚರ್ಚಿಸಲು ಈ ನೋಟಿಸ್ ನೀಡಲಾಗಿದೆ. ಅವರು ವಿಚಾರಣೆಗೆ ಸ್ವತಃ ಅಥವಾ ತಮ್ಮ ನ್ಯಾಯವಾದಿಯ ಮೂಲಕ ಹಾಜರಾಗಿ, ತಮ್ಮ ಪರವಾಗಿ ವಾದಿಸಬೇಕು ಎಂಬ ಸೂಚನೆಯೂ ಇದೆ. ಹಾಜರಾಗದಿದ್ದರೆ, ಈ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಪರಿಗಣಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆಯೂ ನೋಟಿಸ್‌ನಲ್ಲಿ ನೀಡಲಾಗಿದೆ.

ನೂತನ ಪೊಲೀಸ್ ಅಧೀಕ್ಷಕ ಬಂದ ಬೆನ್ನಲ್ಲೇ ರಾತ್ರೋರಾತ್ರಿ ಪೊಲೀಸರ ಕಾರ್ಯಾಚರಣೆ ಹಿಂದೂ ಕಾರ್ಯಕರ್ತರ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ, ಜಿಲ್ಲೆಯಲ್ಲಿ ಹೊಸ ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಭಾಗವಾಗಿ, ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲ ಹಿಂದೂ ಕಾರ್ಯಕರ್ತರ ಮನೆಗಳಿಗೆ ರಾತ್ರೋರಾತ್ರಿ ಪೊಲೀಸರು ಭೇಟಿ ನೀಡುತ್ತಿದ್ದಾರೆ ಎಂಬ ಆರೋಪಗಳು ಹೊರಬಂದಿವೆ. ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಮನೆಗೆ ತೆರಳಿ, ಜಿಪಿಎಸ್ ಲೊಕೇಶನ್, ವ್ಯಕ್ತಿಯ ಫೋಟೋ ಹಾಗೂ ವಾಹನದ ಚಿತ್ರಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಈ ಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿಶ್ವ ಹಿಂದೂ ಪರಿಷತ್ (VHP) ಮತ್ತು ಇತರ ಸಂಘಟನೆಗಳು, ಈ ಕಾರ್ಯವಿಧಾನವು ಹಿಂದೂ ನಾಯಕರನ್ನು ಹಾಗೂ ಸಂಘಟನೆಯವರುಗಳನ್ನು ಅಪರಾಧಿಗಳಂತೆ ಬಿಂಬಿಸಲು ನಡೆದಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿವೆ. "ಕಾನೂನು ಸುವ್ಯವಸ್ಥೆ ಕಾಪಾಡುವ ನಾಮದಲ್ಲಿ ಮಾನಸಿಕ ಕಿರುಕುಳ ನೀಡುವ ಪೊಲೀಸ್‌ ಕ್ರಮ ಖಂಡನೀಯ" ಎಂದು VHP ಪ್ರಬಲವಾಗಿ ಹೇಳಿದೆ.

ಪೊಲೀಸರು ರಾತ್ರಿವೇಳೆ ಮನೆಗಳಿಗೆ ಬಂದು, ಜಿಪಿಎಸ್ ಲೊಕೇಶನ್ ಹಾಗೂ ಫೋಟೋ ಸಂಗ್ರಹಿಸುತ್ತಿರುವುದು, ಮನೆಮಂದಿಯಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಕೆಲವರು, ಈ ರೀತಿಯ ನಡೆ ಭಯಭೀತಿಯಿಂದ ಕೂಡಿದೆ ಎಂದು ಹೇಳಿದ್ದಾರೆ. ವಿಹೆಚ್‌ಪಿ ತಿಳಿಸಿರುವಂತೆ, ಇನ್ನು ಮುಂದೆ ಇಂತಹ ಕಿರುಕುಳ ಮುಂದುವರಿದರೆ, ಪೊಲೀಸರ ವಿರುದ್ಧ ಬಲವಾದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಯುವಕರು ಸಮಾಜದಲ್ಲಿ ಧರ್ಮ ಸೇವೆ ನಡೆಸುತ್ತಿರುವಾಗ, ಅವರನ್ನು ರೌಡಿಗಳಂತೆ ಬಿಂಬಿಸುವ ಪ್ರಯತ್ನ ಸ್ವೀಕಾರಾರ್ಹವಲ್ಲ ಎಂದು ಸಂಘಟನೆ ಹೇಳಿದೆ.

"ಇದು ಜವಾಬ್ದಾರಿಯುತ ಆಡಳಿತಕ್ಕೆ ಮತ್ತು ನೈತಿಕ ಪೊಲೀಸ್ ಕಾರ್ಯವಿಧಾನಕ್ಕೆ ವಿರುದ್ಧವಾದ ಕ್ರಮ. ಸಮಾಜದಲ್ಲಿ ಶಾಂತಿ ಹಾಗೂ ವಿಶ್ವಾಸ ಕಾಪಾಡಬೇಕಾದ ಪೊಲೀಸ್ ಇಲಾಖೆ, ಹೆದರಿಸುವ ಮತ್ತು ಮಾನಸಿಕ ಹಿಂಸೆ ನೀಡುವ ರೀತಿಯಲ್ಲಿ ವರ್ತಿಸುತ್ತಿರುವುದು ನಿಂದನೀಯ" ಎಂದು ಹಿಂದೂ ಸಂಘಟನೆಗಳು ಒತ್ತಿ ಹೇಳಿವೆ.