ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣುಪಾಲು
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಿಂದ ಕುಮಾರಧಾರ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಜರಿದು ಮನೆ ಕುಸಿತವಾಗಿ ಇಬ್ಬರು ಹೆಣ್ಣು ಮಕ್ಕಳು ಮಣ್ಣುಪಾಲಾದ ಘಟನೆ ಸೋಮವಾರ ರಾತ್ರಿ ಸುಮಾರು 7:30ರ ವೇಳೆಗೆ ಸಂಭವಿಸಿದೆ.
ಸುಬ್ರಹ್ಮಣ್ಯ (ಆ.01): ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಿಂದ ಕುಮಾರಧಾರ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಜರಿದು ಮನೆ ಕುಸಿತವಾಗಿ ಇಬ್ಬರು ಹೆಣ್ಣು ಮಕ್ಕಳು ಮಣ್ಣುಪಾಲಾದ ಘಟನೆ ಸೋಮವಾರ ರಾತ್ರಿ ಸುಮಾರು 7:30ರ ವೇಳೆಗೆ ಸಂಭವಿಸಿದೆ. ಸುಬ್ರಹ್ಮಣ್ಯ ಕುಮಾರಧಾರದ ಸ್ನಾನಘಟ್ಟದ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾಾರಿಯ ಪರ್ವತಮುಖಿ ಎಂಬಲ್ಲಿ ದುರಂತ ಸಂಭವಿಸಿದ್ದು, ಕುಸುಮಾಧರ - ರೂಪಾಶ್ರೀ ದಂಪತಿಯ ಮಕ್ಕಳಾದ ಶೃತಿ (11) ಹಾಗೂ ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿದ್ದಾರೆ.
ಅವರ ರಕ್ಷಣೆಗೆ ರಾತ್ರಿಯೂ ಕಾರ್ಯಾಚರಣೆ ನಡೆದಿದೆ. ಕುಮಾರಧಾರಾ ಸ್ನಾನಘಟ್ಟದ ಸಮೀಪವೇ ಇವರ ಮನೆ ಇದ್ದು, ಮನೆಯಿಂದ 100 ಮೀಟರ್ ದೂರದಲ್ಲಿ ಕುಸುಮಾಧರ ಅವರಿಗೆ ಅಂಗಡಿ ಇದೆ. ದಂಪತಿಗೆ ಮೂವರು ಮಕ್ಕಳಿದ್ದು, ದುರಂತಕ್ಕಿಂತ ಸ್ವಲ್ಪ ಮೊದಲು ತಾಯಿ ತನ್ನ ಸಣ್ಣ ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋಗಿದ್ದರು. ಈ ನಡುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮಕ್ಕಳನ್ನು ಎಚ್ಚರಿಸಲೆಂದು ತಂದೆ ಮನೆಗೆ ಬರುವ ವೇಳೆಗೆ ಗುಡ್ಡ ಕುಸಿತು ಮನೆ ಸಂಪೂರ್ಣ ನೆಲಸಮಗೊಂಡು ದುರಂತ ಘಟಿಸಿತ್ತು.
Uttara Kannada: ಮಳೆಗಾಗಿ ಹೆಣ್ಣು - ಹೆಣ್ಣಿನ ನಡುವೆ ದಾದುಮ್ಮನ ಮದುವೆ
ಸುಬ್ರಹ್ಮಣ್ಯ ಪೊಲೀಸರು ಹಾಗೂ ಸ್ಥಳೀಯರಿಂದ ಜೆಸಿಬಿಯಿಂದ ಮಣ್ಣುತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ ಬಿದ್ದಿರುವುದರಿಂದ ರಸ್ತೆ ಬಂದ್ ಆಗಿದ್ದು ಪರಿಹಾರ ಕಾರ್ಯಕ್ಕೆ ತೊಂದರೆ ಉಂಟಾಯಿತು. ಬಳಿಕ ಎನ್‌ಡಿಆರ್‌ಎಫ್ ತಂಡದವರೂ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದರು. ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
4 ಗ್ರಾಮಗಳ ಸಂಪರ್ಕ ಕಡಿತ: ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನಕಿದು ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ. ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ನಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್‌ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ.
ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಹರಿಹರ ಮೂಲಕ ಹರಿಯುವ ನದಿ ತುಂಬಿ ಹರಿಯುತ್ತಿದ್ದು, ಹರಿಹರ ಮುಖ್ಯ ಪೇಟೆ ಭಾಗಶಃ ಮುಳುಗಡೆಯಾಗಿದೆ. ಹರಿಹರದಿಂದ ಕೊಲ್ಲಮೊಗ್ರು, ಕಲ್ಮಕಾರು ಭಾಗಕ್ಕೆ ಸಂಚರಿಸುವ ರಸ್ತೆ ಹರಿಹರ ಪೇಟೆಯಿಂದ ಮುಂದಕ್ಕೆ ಸಂಪೂರ್ಣ ಜಲಾವೃತಗೊಂಡು, ಬಾಳುಗೋಡಿಗೆ ಸಂಪರ್ಕ ಕಡಿತವಾಗಿದೆ. ಸುಬ್ರಹ್ಮಣ್ಯ ಮಳೆಯಾಳ ಮಾರ್ಗವಾಗಿ ಹರಿಹರ ಈ ಭಾಗದ ಗುಂಡಡ್ಕ ಸೇತುವೆ ಮುಳುಗಡೆಗೊಂಡಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಯೊಳಗೆ ನೀರು ನುಗ್ಗಿದೆ. ಬೈಕೊಂದು ಮುಳುಗಡೆಗೊಂಡಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವೃತಗೊಂಡಿವೆ, ಕೃಷಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ.
Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!
ಕೊಲ್ಲಮೊಗ್ರು ಗ್ರಾಮದ ಕಟ್ಟಗೋವಿಂದನಗರ ನಿವಾಸಿ ಕೇಶವ ಭಟ್ ಕಟ್ಟಅವರ ಮನೆಯ ಹಿಂದಿನ ಬರೆ ಜರಿದಿದೆ. ಹರಿಹರ ಮುಖ್ಯಪೇಟೆ ಬಳಿಯ ವ್ಯಾಪಾರಸ್ಥರೋರ್ವರ ಅಂಗಡಿಗೆ ನೆರೆ ನೀರು ನುಗ್ಗಿ ದಾಸ್ತಾನಿಗೆ ಹಾನಿಯಾಗಿದೆ. ಹರಿಹರ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಕಾಂಪೌಂಡ್ ಜರಿದು ಹಾನಿಯಾಗಿದೆ. ಬಾಳುಗೋಡು ಕಟ್ಟೆಮನೆ ದಾಮೋದರ ಎಂಬವರ ಮನೆ ಹಿಂಬದಿ ಜರಿದು ಬಿದ್ದಿದೆ. ಹರಿಹರ ಎಲ್ಲಪಡ್ಕ ನಿವಾಸಿ ಮಹಾಲಿಂಗ ಕೆರೆಕ್ಕೋಡಿ ಮನೆ ಹಿಂಬದಿ ಜರಿದು ಬಿದ್ದು ಹಾನಿಯಾಗಿದೆ. ಹರಿಹರ ನಿವಾಸಿ ವಿಜಯ, ಗಣೇಶ ಅವರ ಮನೆ ಬಳಿ ಭೂಕುಸಿತವಾಗಿದೆ. ಐನಕಿದು ಗ್ರಾಮದ ದೇವಸ್ಥಾನ ಪಕ್ಕದ ನಿವಾಸಿ ಕುಸುಮಾಧರ ಎಂಬವರ ಮನೆ ಸಂಪೂರ್ಣ ಮುಳುಗಿದೆ. ಹರಿಹರದ ಪಲ್ಲತ್ತಡ್ಕ ನಿವಾಸಿ ಯೊಗೀಶ್ ಕುಕ್ಕುಂದ್ರಡ್ಕ ಅವರಿಗೆ ಸೇರಿದ 500 ತೆಂಗಿನಕಾಯಿ ನೀರಿನಲ್ಲಿ ಕೊಚ್ಚಿಹೋಗಿದೆ.