ಹಿಜಾಬ್‌ ವಿವಾದದ ಮೂಲಕ ಗಮನ ಸೆಳೆದಿದ್ದ ಮಂಗಳೂರು ವಿವಿ ಕಾಲೇಜಿನ ಐವರು ವಿದ್ಯಾರ್ಥಿನಿಯರು ಈಗ ವರ್ಗಾವಣೆ ಪ್ರಮಾಣಪತ್ರ(ಟಿಸಿ) ಕೋರಿ ಪ್ರಾಂಶುಪಾಲರಿಗೆ ಅರ್ಜಿ ನೀಡಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ವಿದ್ಯಾರ್ಥಿನಿಯರು ಟಿಸಿಗಾಗಿ ಅರ್ಜಿ ಸಲ್ಲಿಸಿದ್ದರು.

ಮಂಗಳೂರು (ಜೂ.21): ಹಿಜಾಬ್‌ ವಿವಾದದ ಮೂಲಕ ಗಮನ ಸೆಳೆದಿದ್ದ ಮಂಗಳೂರು ವಿವಿ ಕಾಲೇಜಿನ ಐವರು ವಿದ್ಯಾರ್ಥಿನಿಯರು ಈಗ ವರ್ಗಾವಣೆ ಪ್ರಮಾಣಪತ್ರ(ಟಿಸಿ) ಕೋರಿ ಪ್ರಾಂಶುಪಾಲರಿಗೆ ಅರ್ಜಿ ನೀಡಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ವಿದ್ಯಾರ್ಥಿನಿಯರು ಟಿಸಿಗಾಗಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಅಪೂರ್ಣವಾಗಿದ್ದರಿಂದ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪ್ರಾಂಶುಪಾಲರು ಸೂಚಿಸಿದ್ದರು. ಅದರಂತೆ ಕೆಲವು ವಿದ್ಯಾರ್ಥಿನಿಯರು ಅರ್ಜಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ವಿವಿ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. 

ಹಿಜಾಬ್‌ ಕಾರಣ ಪ್ರವೇಶ ನಿರಾಕರಿಸಿದ್ದರಿಂದ ಸುಮಾರು 15 ವಿದ್ಯಾರ್ಥಿನಿಯರು ತರಗತಿಗೆ ಗೈರುಹಾಜರಾಗುತ್ತಿದ್ದರು. ಅವರಲ್ಲಿ ಮೂವರು ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿ ಶಿಸ್ತು ಕ್ರಮ ಉಲ್ಲಂಘಿಸಿದ ಕಾರಣದಿಂದ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಇದೀಗ ಕಾಲೇಜಿನಲ್ಲಿ ಪದವಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದೆ.

ಮಂಗ್ಳೂರು ವಿವಿ ಕಾಲೇಜು ವಿವಾದ: ನೋಟಿಸ್‌ಗೆ ಉತ್ತರಿಸದ ಹಿಜಾಬ್‌ ವಿದ್ಯಾರ್ಥಿನಿಯರು

ನೋಟಿಸ್‌ ಬೆನ್ನಲ್ಲೇ ಹಿಜಾಬ್‌ ಬಿಟ್ಟು ಕ್ಲಾಸ್‌ಗೆ ಮಂಗಳೂರು ವಿದ್ಯಾರ್ಥಿನಿ: ನಗರದ ಹಂಪನಕಟ್ಟೆ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪ್ರಾಂಶುಪಾಲರು ನೀಡಿದ ನೋಟಿಸ್‌ಗೆ ಮೂವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಉತ್ತರ ನೀಡಿದ್ದು, ಆ ಪೈಕಿ ಒಬ್ಬ ವಿದ್ಯಾರ್ಥಿನಿ ಶನಿವಾರ ಹಿಜಾಬ್‌ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾಳೆ. ಇನ್ನೊಬ್ಬ ವಿದ್ಯಾರ್ಥಿನಿ ನೋಟಿಸ್‌ಗೆ ಉತ್ತರಿಸಿಲ್ಲ.

ಹಿಜಾಬ್‌ ಧರಿಸದೇ ತರಗತಿಗಳಿಗೆ ಹಾಜರಾಗಲು 15 ವಿದ್ಯಾರ್ಥಿನಿಯರು ನಿರಾಕರಿಸಿದ್ದರು. ಇದರಿಂದ ಕಾಲೇಜಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಮೂವರು ವಿದ್ಯಾರ್ಥಿನಿಯರು ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಆ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜು ವತಿಯಿಂದ ನೋಟಿಸ್‌ ನೀಡಲಾಗಿತ್ತು. ಅವರಲ್ಲಿ ಒಬ್ಬ ವಿದ್ಯಾರ್ಥಿನಿ ಶನಿವಾರ ಹಿಜಾಬ್‌ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾಳೆ. 

ಹಿಬಾಬ್ ವಿವಾದ: ಮಂಗಳೂರು ವಿವಿ ಕಾಲೇಜು 'ಬಾಹ್ಯ ಶಕ್ತಿಗಳು' ಅಂದಿದ್ದು ಯಾರಿಗೆ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ, ಪ್ರಸಕ್ತ ವಿವಿ ಕಾಲೇಜಿನಲ್ಲಿ ಬಿಕಾಂ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದೆ. ಹಾಗಾಗಿ ಪದವಿ ತರಗತಿಗಳನ್ನು ಸುಮಾರು 15 ದಿನಗಳ ಕಾಲ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಸ್ನಾತಕೋತ್ತರ ಪದವಿ ತರಗತಿ ಮಾತ್ರ ಆಫ್‌ಲೈನ್‌ನಲ್ಲಿ ನಡೆಯುತ್ತಿದೆ. ಶನಿವಾರ ಅರ್ಧ ದಿನ ಮಾತ್ರ ತರಗತಿ ಇದ್ದು, ಸೋಮವಾರ ಕೂಡ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದುವರಿಯಲಿದೆ. ಹೀಗಾಗಿ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಯಾವುದೇ ದೂರು ನೀಡಲಾಗಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.