ಹಿಜಾಬ್ ನಿಷೇಧ ರದ್ದುಗೊಳಿಸಿದ್ರೆ; ಕರ್ನಾಟಕದ ಶಾಲಾ-ಕಾಲೇಜುಗಳು ಕೇಸರಿಮಯ: ಶರಣ್ ಪಂಪ್‌ವೆಲ್ ಎಚ್ಚರಿಕೆ
ಒಂದು ವೇಳೆ ಕಾಂಗ್ರೆಸ್ ಸರ್ಕಾರ ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಕರ್ನಾಟಕದ ಎಲ್ಲ ಶಾಲಾ ಕಾಲೇಜುಗಳು ಕೇಸರಿಮಯವಾಗಲಿವೆ ಎಂದು ರಾಜ್ಯ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದರು.
ಬೆಂಗಳೂರು (ಡಿ.23): ಒಂದು ವೇಳೆ ಕಾಂಗ್ರೆಸ್ ಸರ್ಕಾರ ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಕರ್ನಾಟಕದ ಎಲ್ಲ ಶಾಲಾ ಕಾಲೇಜುಗಳು ಕೇಸರಿಮಯವಾಗಲಿವೆ ಎಂದು ರಾಜ್ಯ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದರು.
ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ ಎಂಬ ಸಿಎಂ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆ ವಿಷ ಬೀಜವನ್ನು ಬಿತ್ತಬೇಡಿ. ಹಿಜಾಬ್ ನಿಷೇಧವನ್ನು ರದ್ಧುಗೊಳಿಸಿದರೆ ಕರ್ನಾಟಕದ ಶಾಲಾ ಕಾಲೇಜುಗಳು ಕೇಸರಿಮಯವಾಗಲಿವೆ. ಎಲ್ಲಾ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಶಾಲೆಗೆ ಹೋಗಲು ಕರೆ ಕೊಡುತ್ತೇವೆ. ಹೀಗಾಗಿ ಇಂಥ ಸಂಘರ್ಷಕ್ಕೆ ಸಿದ್ದರಾಮಯ್ಯನವರು ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಹಿಜಾಬ್ ಮೇಲಿನ ನಿಷೇಧ ಹಿಂಪಡೆಯುವ ಕುರಿತು ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ ಯೂಟರ್ನ್!
ಯಾವುದೇ ಕಾರಣಕ್ಕೂ ಹಿಜಾಬ್ ವಾಪಸ್ ತರೋ ಕೆಲಸ ಮಾಡಬೇಡಿ. ಕಳೆದ ಬಾರಿ ಹಿಜಾಬ್ ಹೋರಾಟದಲ್ಲಿ ವಿದ್ಯಾರ್ಥಿಗಳೇ ಇದ್ದರು. ಆವತ್ತು ನಾವು ನೇರವಾಗಿ ಹೋರಾಟದಲ್ಲಿ ಇರಲಿಲ್ಲ. ಇವತ್ತು ಸಿದ್ದರಾಮಯ್ಯ ಪಿಎಫ್ಐ ಚಿಂತನೆಯಲ್ಲಿ ಇದ್ದಾರೆ. ಈ ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ ಮನಸ್ಥಿತಿಯ ಸರ್ಕಾರ ಇದೆ ಎಂಬುದಕ್ಕೆ ಇದು ಸಾಕ್ಷಿ. ಹಿಜಾಬ್ ವಿಚಾರದಲ್ಲಿ ಸರ್ಕಾರ ನಿಲುವು ಬದಲಾವಣೆ ಮಾಡಿದರೆ ಹೋರಾಟ ನಡೆಸುತ್ತೇವೆ. ಸದ್ಯದಲ್ಲೇ ಈ ಬಗ್ಗೆ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡ್ತೇವೆ. ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ಜೊತೆ ಆಗ ಪಿಎಫ್‌ಐ ನಿಂತಿತ್ತು. ಈಗ ಸಿದ್ದರಾಮಯ್ಯ ಅದೇ ಮನಸ್ಥಿತಿಯಿಂದ ಜಾರಿಗೆ ತರಲು ಹೊರಟಿದ್ದಾರೆ.
ಹಿಜಾಬ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ಯಾಕೆ ಮೌನ? ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆ
ಈ ಮೂಲಕ ರಾಜ್ಯದಲ್ಲಿ ಮತ್ತೆ ಸಂಘರ್ಷ ಸೃಷ್ಟಿಸಲು ಕೈ ಹಾಕಿದ್ದಾರೆ. ಈವರೆಗೆ ಯಾರೂ ಮತ್ತೆ ಅದನ್ನ ಜಾರಿಗೆ ತನ್ನಿ ಅಂತ ಮನವಿ ಮಾಡಿಲ್ಲ. ಆದ್ರೂ ಸಿದ್ದರಾಮಯ್ಯ ತಾವೇ ಸ್ವತಃ ಈ ನಿರ್ಧಾರ ಮಾಡಿದ್ದಾರೆ. ಶೈಕ್ಷಣಿಕ ಕೇಂದ್ರಗಳಲ್ಲಿ ಸಮವಸ್ತ್ರದ ನಿಯಮವಷ್ಟೇ ಇರಬೇಕು. ಯಾವುದೇ ಧರ್ಮದವರಾದ್ರೂ ಶಾಲಾ ಯುನಿಫಾರ್ಮ್ ಇರಬೇಕು. ಧಾರ್ಮಿಕ ಉಡುಪುಗಳು ತರಗತಿಯೊಳಗೆ ಇರಬಾರದು. ಶಾಲೆಗೆ ತನ್ನದೇ ಆದ ಡ್ರೆಸ್ ಕೋಡ್ ಇದೆ. ಇದೆಲ್ಲ ಸಿಎಂ ಆದವರಿಗೆ ತಿಳಿದಿಲ್ಲವಾ? ಮುಂಬರುವ ಲೋಕಸಭಾ ಚುನಾವಣೆಗೆ ಲಾಭ ಪಡೆಯಲು ಇಂಥ ಹೇಳಿಕೆ ನೀಡುತ್ತಿದ್ದಾರೆ. ಹಿಜಾಬ್ ವಿಚಾರವಾಗಿ ಬೇರೆ ಯಾವುದೇ ನಿಯಮ ಜಾರಿಗೆ ಬಂದರೂ ನಾವು ಸುಮ್ಮನೆ ಇರೋದಿಲ್ಲ. ಮುಂದೆ ಆಗುವ ಸಂಘರ್ಷಗಳಿಗೆ ಮುಖ್ಯಮಂತ್ರಿಗಳೇ ಹೊಣೆಯಾಗಿರುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.