ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಏಮಾರಿಸಿ ವಿಧಾನಸಭೆ ಸಭಾಂಗಣ ಪ್ರವೇಶಿಸಿದ್ದರಿಂದ ಆದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ವಿಧಾನಸೌಧ, ಶಾಸಕರ ಭವನ, ಹೈಕೋರ್ಚ್‌ ಸೇರಿದಂತೆ ಶಕ್ತಿ ಕೇಂದ್ರದ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ವಿಧಾನಸಭೆ (ಜು.11) :  ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಏಮಾರಿಸಿ ವಿಧಾನಸಭೆ ಸಭಾಂಗಣ ಪ್ರವೇಶಿಸಿದ್ದರಿಂದ ಆದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ವಿಧಾನಸೌಧ, ಶಾಸಕರ ಭವನ, ಹೈಕೋರ್ಚ್‌ ಸೇರಿದಂತೆ ಶಕ್ತಿ ಕೇಂದ್ರದ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಸದನದಲ್ಲಿ ಸೋಮವಾರ ಈ ವಿಷಯ ಕುರಿತು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಸ್ಪೀಕರ್‌, ಅಪರಿಚಿತ ವ್ಯಕ್ತಿಯ ಸದನ ಪ್ರವೇಶದಿಂದ ಭದ್ರತೆ ವಿಚಾರದಲ್ಲಿ ಲೋಪವಾಗಿರಬಹುದು. ಆದರೆ, ದೇವರೇ ಆ ವ್ಯಕ್ತಿಯ ಮೂಲಕ ನಮ್ಮ ಕಣ್ಣು ತೆರೆಸಿದ್ದಾನೆ ಎಂದು ಭಾವಿಸುತ್ತೇನೆ. ಸದನದ ಪ್ರತಿಯೊಬ್ಬ ಸದಸ್ಯರೂ ಎಚ್ಚರ ವಹಿಸಬೇಕು. ಈ ಸದನಕ್ಕೆ ಸಾಕಷ್ಟುಹೊಸ ಸದಸ್ಯರು ಈ ಬಾರಿ ಆಯ್ಕೆಯಾಗಿ ಬಂದಿದ್ದಾರೆ. ವಿಧಾನಸೌಧ ಪ್ರವೇಶಿಸುವಾಗ ಶಾಸಕರಾಗಲಿ, ಪತ್ರಕರ್ತರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಯಾರೇ ಆಗಲಿ, ಭದ್ರತಾ ಸಿಬ್ಬಂದಿ ತಮ್ಮ ಗುರುತಿನ ಚೀಟಿ ಕೇಳಿದಾಗ ಸ್ವಾಭಿಮಾನಕ್ಕೆ ಧಕ್ಕೆ ಆಯಿತು ಎಂದು ಭಾವಿಸಬಾರದು. ಮುಂದೆ ಇಂತಹ ಲೋಪಗಳಾಗದಂತೆ ಎಚ್ಚರ ವಹಿಸಲಾಗುವುದು. ಈ ನಿಟ್ಟಿನಲ್ಲಿ ಹೈಕೋರ್ಚ್‌, ವಿಧಾನಸೌಧ, ರಾಜಭವನ ಸೇರಿದಂತೆ ಶಕ್ತಿಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು ಎಂದು ಸ್ಪೀಕರ್‌ ಹೇಳಿದರು.

ಕಲಾಪದ ವೇಳೆ ಭದ್ರತಾ ಲೋಪ: 15 ನಿಮಿಷ ಬಜೆಟ್‌ ಕಲಾಪದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿ !

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಬಸವರಾಜ ರಾಯರಡ್ಡಿ ಅವರು, ಸಂಸತ್‌ ಭವನ ಪ್ರವೇಶಿಸುವಾಗ ಎಲ್ಲ ಸಂಸದರು, ರಾಜ್ಯಸಭೆ ಸದಸ್ಯರ ಗುರುತು ಪತ್ತೆಗೆ ಫೇಸ್‌ರೀಡರ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಅಂತಹ ವ್ಯವಸ್ಥೆಯನ್ನು ಇಲ್ಲೂ ತರುವಂತೆ ಸಲಹೆ ನೀಡಿದರು. ಸೋಮವಾರ ಸದನ ಆರಂಭಕ್ಕೂ ಮುನ್ನ ಸ್ಪೀಕರ್‌ ಯು.ಟಿ ಖಾದರ್‌ ವಿಧಾನಸೌಧ ಪ್ರದಕ್ಷಿಣೆ ಮೂಲಕ ಭದ್ರತೆಯನ್ನು ಪರಿಶೀಲನೆ ನಡೆಸಿದರು.

ಪೊಲೀಸರಿಂದ ತನಿಖೆ:

ಇದಕ್ಕೂ ಮುನ್ನ ಘಟನೆಯ ವಿವರ ನೀಡಿದ ಸ್ಪೀಕರ್‌, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವ ವೇಳೆ ಸದನಕ್ಕೆ ಅಪರಿತ ವ್ಯಕ್ತಿಯೊಬ್ಬರು ತಾವು ಮೊಳಕಾಲ್ಮೂರು ಶಾಸಕ ಎಂದು ಸುಳ್ಳು ಹೇಳಿ ಪ್ರವೇಶಿಸಿದ್ದರು. ಅವರನ್ನು ಅಕ್ಕಪಕ್ಕದ ಸದಸ್ಯರು ಮಾತನಾಡಿಸಿದಾಗಲೂ ಹಾಗೆಯೇ ಹೇಳಿದ್ದಾರೆ. ಆದರೆ, ಮೊಳಕಾಲ್ಮೂರು ಕ್ಷೇತ್ರದಿಂದ ಆಯ್ಕೆಯಾಗಿರುವುದು ಎನ್‌.ವೈ. ಗೋಪಾಲಕೃಷ್ಣ ಅವರಾಗಿರುವುದರಿಂದ ಅನುಮಾನಗೊಂಡ ಕೆಲ ಶಾಸಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನಮ್ಮ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಸುಳ್ಳು ಹೇಳಿ ಪ್ರವೇಶಿಸಿರುವುದು ಗೊತ್ತಾಗಿ ವಿಧಾನಸೌಧ ಠಾಣಾ ಪೊಲೀಸರಿಗೆ ಒಪ್ಪಿಸಿ ದೂರು ನೀಡಲಾಗಿದೆ. ವಿಚಾರಣೆ ವೇಳೆ ಆತ ಚಿತ್ರದುರ್ಗದ ನಿವಾಸಿ ತಿಪ್ಪೇರುದ್ರಪ್ಪ(76) ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕನೆಂದು ಹೇಳಿ ವಿಧಾನಸಭೆ ಒಳಹೋದ ವಕೀಲ: ಪೊಲೀಸರ ಕೈಗೆ ಸಿಕ್ಕು ವಿಲವಿಲ