ಉಡುಪಿ(ಡಿ.17): ಮಲ್ಪೆ ಸಮೀಪದ ಪಡುಕರೆ ಬೀಚ್‌ನಲ್ಲಿ ಅಂದಾಜು 800 ಕೋಟಿ ರು. ವೆಚ್ಚದಲ್ಲಿ ಮರೀನಾ ನಿರ್ಮಾಣ ಸಾಧ್ಯವೇ ಎಂಬ ಬಗ್ಗೆ ಪುಣೆಯ ಸಿ.ಡಬ್ಲ್ಯೂ.ಪಿ.ಆರ್‌.ಎಸ್‌. ಸಂಸ್ಥೆಯಿಂದ ಸಾಧ್ಯತಾ ವರದಿ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಬಗ್ಗೆ ಬುಧವಾರ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ಕಾರ್ಯವನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಪಡುಕರೆಯಲ್ಲಿ ಪೂರ್ಣ ಪ್ರಮಾಣದ ಮರೀನಾ ನಿರ್ಮಿಸಿದಲ್ಲಿ, ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆ ವಿಫುಲ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದರೆ ಸ್ಥಳೀಯ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ, ಸಿ.ಆರ್‌.ಝಡ್‌. ನಿಮಯಮಗಳ ಉಲ್ಲಂಘನೆಯಾಗದಂತೆ ಯೋಜನೆಯನ್ನು ತಯಾರಿಸಬೇಕು ಎಂದವರು ಹೇಳಿದರು.

ಸಾಧ್ಯತಾ ವರದಿ, ವಿಸ್ತೃತ ಯೋಜನಾ ವರದಿಯನ್ನು ಫೆಬ್ರವರಿ ಒಳಗೆ ನೀಡಿದಲ್ಲಿ, ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಅಗತ್ಯ ಅನುಮತಿಗಳನ್ನು ಪಡೆಯಲು ಸಾಧ್ಯ ಎಂದು ಶಾಸಕ ರಘುಪತಿ ಭಟ್‌ ಹೇಳಿದರು. ಇದಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ ಅವರು, ಶೀಘ್ರವಾಗಿ ವರದಿಯನ್ನು ಪಡೆಯಲು ಪ್ರಾಧಿಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆ

ಮರೀನಾ ಯೋಜನೆಯ ಬಗ್ಗೆ ಗೋವಾದ ಅಮೋಲ್‌ ಮರೈನ್‌ ಟೆಕ್‌ನ ಮಿಲಿಂದ ಪ್ರಭು ಅವರು ವಿವರಗಳನ್ನು ನೀಡಿದರು. ಸಭೆಯಲ್ಲಿ ಎಡಿಸಿ ಸದಾಶಿವ ಪ್ರಭು, ಎಸಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್‌ ಕಮರೂರಮನೆ, ಪ್ರವಾಸೋಧ್ಯಮ ಸಮಾಲೋಚಕ ಅಮಿತ್‌, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಏನಿದು ಮರೀನಾ?

ಸಮುದ್ರದಲ್ಲಿ ಹಾದು ಹೋಗುವ ದೇಶ ವಿದೇಶದ ಭಾರಿ ಹಡಗುಗಳು, ವಿಹಾರ ನೌಕೆಗಳು, ಬೋಟುಗಳು ಕೆಲಕಾಲ ತಂಗುವುದಕ್ಕೆ, ದುರಸ್ತಿಗೆ ಇರುವ ತಂಗುದಾಣವೇ ಮರೀನಾ. ಇಲ್ಲಿ ಸಮುದ್ರದಲ್ಲಿ ತೇಲುವ ಹೋಟೆಲ್‌, ರೆಸ್ಟೋರೆಂಟುಗಳು, ವೈವಿಧ್ಯಮಯ ಮಳಿಗೆಗಳು, ವಸತಿಗೃಹಗಳಿರುತ್ತವೆ. ಮನರಂಜನೆಗೆ ಎಲ್ಲ ವ್ಯವಸ್ಥೆಗಳಿರುತ್ತವೆ. ಇದರಿಂದ ಭಾರೀ ಪ್ರಮಾಣದಲ್ಲಿ ಆದಾಯವೂ ಸರ್ಕಾರಕ್ಕೆ ಲಭಿಸುತ್ತದೆ. ಭಾರತದಲ್ಲಿ ವಿಶ್ವ ಮಟ್ಟದ ಮರೀನಾಗಳಿಲ್ಲ. ಕೊಚ್ಚಿನ್‌ನಲ್ಲಿರುವ ಮರೀನಾ ಕೂಡಾ ವಿದೇಶಿ ಬೋಟು, ವಿಹಾರ ನೌಕೆಗಳು ತಂಗುವುದಕ್ಕೆ ಬೇಕಾದ ಸೌಲಭ್ಯಗಳಿಲ್ಲ.

ಪಡುಕರೆಯೇ ಏಕೆ?

ಅರಬ್ಬಿ ಸಮುದ್ರದ ಈ ಭಾಗದಲ್ಲಿ ವರ್ಷಕ್ಕೆ 4000 ನೌಕೆಗಳು ಹಾದು ಹೋಗುತ್ತವೆ. ಆದರೆ ಅವುಗಳಿಗೆ ತಂಗುವುದಕ್ಕೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿರುವ ಮರೀನಾ ಈ ಭಾಗದಲ್ಲಿಲ್ಲ. ಪಡುಕರೆ ಸಮುದ್ರ ತೀರದಲ್ಲಿ 3.69 ಕಿಮೀ ಉದ್ದದ ಮರೀನಾವನ್ನು ನಿರ್ಮಿಸುವುದಕ್ಕೆ ಅವಕಾಶ ಇದೆ. ಇಲ್ಲಿರುವ ಸಣ್ಣ ದ್ವೀಪ ಮತ್ತು ತೀರದ ನಡುವೆ ಸುರಕ್ಷಿತ ಮರೀನಾ ನಿರ್ಮಾಣಕ್ಕೆ ನೈಸರ್ಗಿಕ ಅವಕಾಶ ಇದೆ. ಆದ್ದರಿಂದ ಪಡುಕರೆಯೇ ಮರೀನಾ ನಿರ್ಮಾಣಕ್ಕೆ ಯೋಗ್ಯವಾಗಿದೆ.