ಬೆಂಗಳೂರು ಲಾಕ್‌ಡೌನ್: ಇಂದಿರಾ ಕ್ಯಾಂಟೀನ್ ಊಟ, ತಿಂಡಿಗೆ ಹೆಚ್ಚಿನ ಬೇಡಿಕೆ
ಬೆಂಗಳೂರು ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಬಂದ್ ಹಿನ್ನೆಲೆ| ಇಂದಿರಾ ಕ್ಯಾಂಟೀನ್ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು, ನಿರ್ಗತಿಕರು, ಭಿಕ್ಷುಕರು| ಲಾಕ್‌ಡೌನ್ ಇರುವುದರಿಂದ ಪಾರ್ಸಲ್ ಮೂಲಕ ಬೆಳಗ್ಗೆ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟ ವಿತರಣೆ|
ಬೆಂಗಳೂರು(ಜು.16): ಲಾಕ್‌ಡೌನ್ ಪರಿಣಾಮ ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಎಲ್ಲವೂ ಬಂದ್ ಆಗಿದ್ದರಿಂದ ಸಾಮಾನ್ಯ ಜನರು, ಬಡವರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಬಂದು ಊಟ, ತಿಂಡಿ ಪಡೆದುಕೊಂಡಿದ್ದಾರೆ.
ಆಯ್ದ ಹೊಟೇಲ್‌ಗಳಲ್ಲಿ ಮಾತ್ರ ಊಟ, ತಿಂಡಿಗಳ ಪಾರ್ಸಲ್ ಸೇವೆ ಇತ್ತು. ಹೀಗಾಗಿ ಬಡವರು ಇಂದಿರಾ ಕ್ಯಾಂಟೀನ್ ಕಡೆಗೆ ಮುಖ ಮಾಡಿದರು. ಇದರಿಂದ ಮಾಮೂಲಿ ದಿನಗಳಿಗಿಂತ ಊಟ, ತಿಂಡಿಗಳಿಗೆ ಶೇ.30ರಷ್ಟು ಹೆಚ್ಚಿನ ಬೇಡಿಕೆ ಉಂಟಾಯಿತು ಎಂದು ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುವ ಶೇಫ್ ಟ್ಯಾಕ್ ಸಂಸ್ಥೆಯ ಮುಖ್ಯಸ್ಥ ಗೋವಿಂದ ಪೂಜಾರಿ ತಿಳಿಸಿದ್ದಾರೆ.
ಬೆಂಗಳೂರು ಲಾಕ್‌ಡೌನ್: SSLC ಮೌಲ್ಯಮಾಪನಕ್ಕೆ ಅರ್ಧದಷ್ಟು ಶಿಕ್ಷಕರು ಗೈರು
‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ಸಾಮಾನ್ಯ ದಿನದಲ್ಲಿ ಒಂದು ಇಂದಿರಾ ಕ್ಯಾಂಟೀನ್‌ನಲ್ಲಿ ಹೊತ್ತಿಗೆ ಸುಮಾರು 250 ಪ್ಲೇಟ್ ಊಟ, ಉಪಹಾರ ಮಾರಾಟವಾಗುತ್ತಿತ್ತು. ಬುಧವಾರ ಶೇ.30 ರಷ್ಟು ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ, 250 ಪ್ಲೇಟ್ ಮಾರಾಟವಾಗುವ ಕ್ಯಾಂಟೀನ್‌ಗಳಲ್ಲಿ 300 ಪ್ಲೇಟ್ ಮಾರಾಟವಾಯಿತು. ಇನ್ನು ನಿಗದಿತ 5ಕ್ಕೆ ಉಪಹಾರ ಹಾಗೂ 10ಕ್ಕೆ ಊಟ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದ ನಗರದಲ್ಲಿ ಎಲ್ಲ ಹೋಟೆಲ್, ದರ್ಶಿನಿಗಳು ಬಂದ್ ಆಗಿದ್ದರಿಂದ ಸಾರ್ವಜನಿಕರು, ನಿರ್ಗತಿಕರು, ಭಿಕ್ಷುಕರು ಇಂದಿರಾ ಕ್ಯಾಂಟೀನ್ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಲಾಕ್‌ಡೌನ್ ಇರುವುದರಿಂದ ಪಾರ್ಸಲ್ ಮೂಲಕ ಬೆಳಗ್ಗೆ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟ ವಿತರಣೆ ಮಾಡಲಾಯಿತು ಎಂದರು.