ಬೆಂಗಳೂರು(ಜು.16): ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿ ಇರುವುದರಿಂದ ಬುಧವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಕಡಿಮೆ ಸಂಖ್ಯೆಯಲ್ಲಿ ಶಿಕ್ಷಕರು ಹಾಜರಾಗಿದ್ದಾರೆ. ಮೊದಲ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.50 ಮತ್ತು ಬೆಂ.ನಗರದಲ್ಲಿ ಶೇ.30 ರಷ್ಟು ಮೌಲ್ಯಮಾಪಕರು ಮಾತ್ರ ಹಾಜರಾಗಿದ್ದಾರೆ.

ರಾಜ್ಯಾದ್ಯಂತ ಜು.11ರಿಂದ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಆರಂಭವಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದರಿಂದ ಮೌಲ್ಯಮಾಪನ ಇರುವುದಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಮೌಲ್ಯಮಾಪನಕ್ಕೆ ಅನುಮತಿ ನೀಡಿರುವುದರಿಂದ ಬೆಂ.ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಬುಧವಾರದಿಂದ ಆರಂಭವಾಗಿದೆ.

ತಾಯಿ ಮೃತಪಟ್ಟರೂ SSLC ಮೌಲ್ಯ ಮಾಪನಕ್ಕೆ ಬಂದ ಶಿಕ್ಷಕಿ: ಸಚಿವರ ಪ್ರಶಂಸೆ

ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಬೆಂಗಳೂರು ನಗರದಲ್ಲಿ ನೆಲೆಸಿರುವ ಶಿಕ್ಷಕರು ಗ್ರಾಮೀಣ ಪ್ರದೇಶಗಳಿಗೆ ತೆರಳಿದ್ದಾರೆ. ಅಲ್ಲದೆ, ಲಾಕ್‌ಡೌನ್‌ ಇರುವುದರಿಂದ ನಗರದಲ್ಲಿರುವ ಮಹಿಳಾ ಶಿಕ್ಷಕಿಯರು ಸಾರಿಗೆ ಸಮಸ್ಯೆಯಿಂದ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಶಿಕ್ಷಕರ ವಿರೋಧ:

ಕಂದಾಯ ಸಚಿವರು ಬೆಂಗಳೂರಿನಿಂದ ಹೊರಗೆ ಹೋಗುವವರು ಸೋಮವಾರವೇ ಹೊರಟು ಬಿಡಿ. ಮಂಗಳವಾರದಿಂದ ಲಾಕ್‌ಡೌನ್‌ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದಾಗಿ ಬಹುತೇಕ ಶಿಕ್ಷಕರು ಬೆಂಗಳೂರಿನಿಂದ ತಮ್ಮೂರಿಗೆ ಹೋಗಿದ್ದಾರೆ. ಇದೀಗ ಮೌಲ್ಯಮಾಪನಕ್ಕೆ ಬನ್ನಿ ಎಂದರೆ ಯಾವ ನ್ಯಾಯ? ವಾಸಪ್‌ ಬರಲು ಹೇಗೆ ಸಾಧ್ಯ? ಅಲ್ಲದೆ, ಇದು ಇಲಾಖೆಯ ಸಮನ್ವಯತೆ ಕೊರತೆಯನ್ನು ಎದ್ದು ತೋರಿಸುತ್ತಿದೆ. ತಕ್ಷಣ ಈ ಆದೇಶವನ್ನು ವಾಪಸ್‌ ತೆಗೆದುಕೊಳ್ಳಬೇಕೆಂದು ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ವೇದಿಕೆ ಅಧ್ಯಕ್ಷ ಎ.ಪಿ.ರಂಗನಾಥ್‌ ಆಗ್ರಹಿಸಿದ್ದಾರೆ

ಈ ಬಗ್ಗೆ ಮಾತನಾಡಿದ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಅವರು, ಮೌಲ್ಯಮಾಪನಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದರಿಂದ ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಮೌಲ್ಯಮಾಪನ ಆರಂಭಿಸಲಾಗಿದೆ. ಶಿಕ್ಷಕರು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮೌಲ್ಯಮಾಪನಕ್ಕೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.