ಅನಧಿಕೃತ ಜಾಹೀರಾತು ನಿರ್ಲಕ್ಷ್ಯಕ್ಕೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿದ ಹೈಕೋರ್ಟ್
ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಗಟ್ಟಲು ಸೂಚಿಸಿ ಹೊರಡಿಸಿರುವ ಆದೇಶ ಪಾಲಿಸಲು ವಿಫಲವಾಗಿವೆ ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಶುಕ್ರವಾರ ಗರಂ ಆಯ್ತು.
ಬೆಂಗಳೂರು (ಜು.27): ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಗಟ್ಟಲು ಸೂಚಿಸಿ ಹೊರಡಿಸಿರುವ ಆದೇಶ ಪಾಲಿಸಲು ವಿಫಲವಾಗಿವೆ ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಶುಕ್ರವಾರ ಅಸಮಾಧಾನ ಹೊರಹಾಕಿತು.
ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಹಲವು ಆದೇಶ ಪಾಲಿಸಿರುವ ವಿಫಲವಾಗಿರುವುದು ಏಕೆ? ಕೋರ್ಟ್ ಆದೇಶವನ್ನು ಗಂಭೀರವಾಗಿ ಪರಿಗಣಿಸದಿರುವುದು ಎಷ್ಟು ಸರಿ? ಅನಧಿಕೃತ ಜಾಹೀರಾತು ಅಳವಡಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ? ನ್ಯಾಯಾಲಯದ ಆದೇಶ ಪಾಲಿಸದಕ್ಕೆ ಏಕೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಾರದು? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರ್ಕಾರ, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿ, ನಾಯಿಗಳಿಗೆ ಬಿಸ್ಕತ್ ಹಾಕುವಂತಿಲ್ಲ
ಅಂತಿಮವಾಗಿ ನಗರದಲ್ಲಿ ಅನಧಿಕೃತ ಜಾಹಿರಾತು ಫಲಕ ಅಳವಡಿಕೆ ತಡೆಯಲು ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ಸಮರ್ಪಕ ಮಾಹಿತಿ ಒಳಗೊಂಡ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆ.12ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಮಾಯಿಗೇಗೌಡ ಪರ ವಕೀಲ ಜಿ.ಆರ್ ಮೋಹನ್ ವಾದ ಮಂಡಿಸಿ, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಹಾಗೂ ಹೋರ್ಡಿಂಗ್ ಅಳವಡಿಕೆ ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ 2017ರಿಂದ ಕಾಲಕಾಲಕ್ಕೆ ಆದೇಶ ನೀಡುತ್ತಾ ಬಂದಿದೆ. ಆದರೂ ಸರ್ಕಾರ ಅಥವಾ ಪಾಲಿಕೆಯಾಗಲಿ ಸೂಕ್ತ ಕ್ರಮ ಜರುಗಿಸಿಲ್ಲ. ಬೆಂಗಳೂರಿನ ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಜಾಹೀರಾತುಗಳ ಅಳವಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಸಂಚಾರ ದಟ್ಟಣೆ ಸೇರಿದಂತೆ ಹಲವು ರೀತಿಯ ತೊಂದರೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಸರ್ಕಾರದ ಪರ ವಕೀಲರು ಉತ್ತರಿಸಿ, ನಗರದ ಅನಧಿಕೃತವಾಗಿ ಜಾಹೀರಾತು ಅಳವಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಹಾಗೂ ದಂಡ ವಿಧಿಸುವುದಕ್ಕಾಗಿ ಆಯಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಈ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಪ್ರಕಾರ ಕ್ರಮ ಎಂದರೆ ಮತ್ತಷ್ಟು ಅನಧಿಕೃತ ಜಾಹೀರಾತು ಫಲಕ, ಫ್ಲೆಕ್ಸ್. ಹೋರ್ಡಿಂಗ್ ಅಳವಡಿಕೆಗೆ ಅನುಮತಿ ನೀಡುವುದೇ? ತಪ್ಪಿತಸ್ಥರ ವಿರುದ್ಧ ಎಷ್ಟು ದಿನದಲ್ಲಿ ಕ್ರಮ ಜರುಗಿಸುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿತು.
ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆ ತೀವ್ರಗೊಳಿಸಿರುವ ಬಿಬಿಎಂಪಿ ಕಳೆದ ಜೂ.1ರಿಂದ ಈವರೆಗೆ 8,362 ಫ್ಲೆಕ್ಸ್‌ಗಳನ್ನು ತೆರವು ಮಾಡಿ, 142 ಎಫ್‌ಐಆರ್ ದಾಖಲಿಸಿದ್ದಾರೆ.
ಅನಧಿಕೃತ ಫ್ಲೆಕ್ಸ್ 142 ಎಫ್‌ಐಆರ್: ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆ ಕುರಿತಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ವಲಯ ಅಧಿಕಾರಿಗಳೊಂದಿಗೆ ಕಳೆದವಾರ ಪರಿಶೀಲನಾ ಸಭೆ ನಡೆಸಿದ್ದರು. ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ನಗರದಲ್ಲಿ ಜೂ. 1ರಿಂದ ಈವರೆಗೆ 8,362 ಫ್ಲೆಕ್ಸ್ ಮತ್ತು ಬ್ಯಾನರ್ ತೆರವುಗೊಳಿಸಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ 267 ದೂರು ದಾಖಲಿಸಲಾಗಿದೆ. ಈ ದೂರು ಆಧರಿಸಿ 142 ಎಫ್‌ಐಆರ್ ದಾಖಲಿಸಲಾಗಿದೆ. ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಿದವರಿಂದ 1 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಮುನೀಶ್ ಮೌದ್ಗಿಲ್, ನಾಗರಿಕರು ಅನಧಿಕೃತವಾಗಿ ಫ್ಲೆಕ್ಸ್-ಬ್ಯಾನರ್ ಅಳವಡಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನಗರದಲ್ಲಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸುವುದು ಹೆಚ್ಚುತ್ತಿದ್ದು, ಅದಕ್ಕೆ ತಡೆಯೊಡ್ಡಬೇಕು. ಒಂದು ವೇಳೆ ಫ್ಲೆಕ್ಸ್‌ಗಳು ಕಂಡು ಬಂದರೆ ಕೂಡಲೇ ತೆರವು ಮಾಡಬೇಕು ಹಾಗೂ ಅದನ್ನು ಹಾಕಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ದಂಡ ವಿಧಿಸಬೇಕು ಎಂದು ಸೂಚಿಸಿದ್ದರು.