ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿ, ನಾಯಿಗಳಿಗೆ ಬಿಸ್ಕತ್ ಹಾಕುವಂತಿಲ್ಲ
ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿಯಾಗಿದೆ. ಬೀದಿ ನಾಯಿಗಳಿಗೆ ಊಟ ಹಾಕುವವರಿಗೆ, ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್‌ಮೆಂಟ್ ಸಂಘ, ಶೈಕ್ಷಣಿಕ ಸಂಸ್ಥೆಗಳು, ಟೆಕ್ ಪಾರ್ಕ್, ಸಾರ್ವಜನಿಕ ಸಂಸ್ಥೆಗಳಿಗೆ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದೆ.
ಬೆಂಗಳೂರು (ಜು.27): ನಾಯಿ, ಬೆಕ್ಕು ಸಾಕುವುದಕ್ಕೆ, ಲಿಫ್ಟ್ ಪ್ರವೇಶಕ್ಕೆ, ನಾಯಿ ಬೊಗಳುವುದಕ್ಕೆ ಆಕ್ಷೇಪಿಸುವುದು ಸೇರಿದಂತೆ ಮೊದಲಾದ ನಿರ್ಬಂಧ ವಿಧಿಸುವಂತಿಲ್ಲ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗವು ಅಪಾರ್ಟ್‌ಮೆಂಟ್ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳಿಗೆ ಸೂಚಿಸಿ ಮಾರ್ಗಸೂಚಿ ರೂಪಿಸಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಲಹೆ, ಕರ್ನಾಟಕ ಸಾಕುಪ್ರಾಣಿಗಳ ಸುತ್ತೋಲೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಆಧಾರಿಸಿ ಬಿಬಿಎಂಪಿಯು ಪ್ರತ್ಯೇಕ ಮಾರ್ಗಸೂಚಿ ರಚಿಸಿ ಬಿಡುಗಡೆ ಮಾಡಿದೆ.
ಬೀದಿ ನಾಯಿಗಳಿಗೆ ಊಟ ಹಾಕುವವರಿಗೆ, ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್‌ಮೆಂಟ್ ಮಾಲೀಕರ ಸಂಘ, ಶೈಕ್ಷಣಿಕ ಸಂಸ್ಥೆಗಳು, ಟೆಕ್ ಪಾರ್ಕ್, ಸಾರ್ವಜನಿಕ ಸಂಸ್ಥೆಗಳಿಗೆ ಬಿಬಿಎಂಪಿಯ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚಿಸಿದೆ.
ಮುಸ್ಲಿಂ ವ್ಯಾಪಾರಿಗಳಿಂದಲೇ ದೂರು, ಬೇರೆ ಮಾಂಸ ಮಾರಾಟ ಆರೋಪ, ಅಬ್ದುಲ್ ...
ಅಪಾರ್ಟ್‌ಮೆಂಟ್- ಕ್ಷೇಮಾಭಿವೃದ್ಧಿ ಸಂಘ: ಸಾಕು ಪ್ರಾಣಿ ಕಾಯ್ದೆಗೆ ವಿರುದ್ಧವಾಗಿ ಯಾವುದೇ ಬೈಲಾ ರೂಪಿಸುವಂತಿಲ್ಲ. ಪ್ರಾಣಿ ಪ್ರಿಯರಿಗೆ ಬೆಕ್ಕು, ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿ ಸಾಕುವುದಕ್ಕೆ ನಿಷೇಧ ಹೇರುವಂತಿಲ್ಲ. ಲಿಫ್ಟ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಒಂದು ವೇಳೆ ನಿರಾಕಸಿದರೆ, ಪ್ರತ್ಯೇಕ ಲಿಫ್ಟ್ ವ್ಯವಸ್ಥೆ ಮಾಡಬೇಕು. ಸಾಕು ಪ್ರಾಣಿಗಳು ಆವರಣಕ್ಕೆ ಬಂದಾಗ ಕಡ್ಡಾಯವಾಗಿ ಮುಖವಾಡ ಹಾಕಬೇಕೆಂದು ನಿರ್ಬಂಧಿಸುವಂತಿಲ್ಲ. ನಾಯಿ ಮತ್ತು ಬೆಕ್ಕು ಬೊಗಳುವುದಕ್ಕೆ ನೆರೆ ಹೊರೆಯವರು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ಅಗತ್ಯವಾದರೆ ಸಾಕು ಪ್ರಾಣಿಗಳ ಓಡಾಟಕ್ಕೆ ಬೆಳಗ್ಗೆ ಮತ್ತು ಸಂಜೆ ಸಮಯ ನಿಗದಿ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ಅನಧಿಕೃತವಾಗಿ ಸಂತಾನೋತ್ಪತ್ತಿ ಕಂಡು ಬಂದರೆ, ನಾಯಿ ಕಚ್ಚಿದರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು. ಸಾಕು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಾರ್ಟ್‌ಮೆಂಟ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳಿಗೆ ಊಟ ಹಾಕುವುದಕ್ಕೆ ಅಡ್ಡಿ ಪಡಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿ: ಸಾಕು ಪ್ರಾಣಿಗಳಿಗೆ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ಬೆತ್ತದಿಂದ ಹೊಡೆಯುವಂತಿಲ್ಲ. ಬೆದರಿಸುವಂತಿಲ್ಲ. ಸಾಕು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿಸಬೇಕು ಎಂದು ಸೂಚಿಸಲಾಗಿದೆ.
ಸಾಕು ಪ್ರಾಣಿ ಸ್ವಚ್ಛತೆ ಕಾಪಾಡಿ: ಸಾಕು ಪ್ರಾಣಿಗಳ ಸ್ವಚ್ಛತೆ ಕಾಪಾಡಬೇಕು. ಹೆಚ್ಚಿನ ಜನ ಸೇರುವ ಸ್ಥಳಗಳಿಗೆ ಕರೆದೊಯ್ಯಬಾರದು. ಬಾಲ್ಕಾನಿಗೆ ಬಿಡಬಾರದು. ಗುಣಮಟ್ಟದ ಆಹಾರ ನೀಡಬೇಕು. ಮಲಗುವುದಕ್ಕೆ ಬೆಚ್ಚನೆ ವ್ಯವಸ್ಥೆ ಮಾಡಬೇಕು. ಮಕ್ಕಳೊಂದಿಗೆ ಸಾಕು ಪ್ರಾಣಿಗಳನ್ನು ಹೊರಗೆ ಕಳುಹಿಸಬಾರದು. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.
ಬೀದಿ ನಾಯಿಗಳ ಆಹಾರಕ್ಕೆ ಪ್ರತ್ಯೇಕ ಸ್ಥಳ: ಬೀದಿ ನಾಯಿಗಳಿಗೆ ಬಿಬಿಎಂಪಿ ಗುರುತಿಸಿದ ಸ್ಥಳದಲ್ಲಿ ಊಟ ಹಾಕಬೇಕು. ರಾತ್ರಿ 10.30ರಿಂದ ಬೆಳಗಿನ ಜಾವ 5.30ರ ಅವಧಿಯಲ್ಲಿ ಊಟ ಹಾಕುವಂತಿಲ್ಲ. ಹಸಿ ಮಾಂಸ ಮತ್ತು ಸಕ್ಕರೆ ಇರುವ ಬಿಸ್ಕತ್ ಹಾಕುವಂತಿಲ್ಲ. ಒಂದು ದಿನ ಊಟ ಹಾಕುವುದು, ಒಂದು ದಿನ ಬಿಡುವುದು ಮಾಡುವಂತಿಲ್ಲ. ಹೆಚ್ಚಿನ ಜನ ಇರುವ ಕಡೆ ಊಟ ಹಾಕಬಾರದು. ಬೇರೆಯವರ ಸ್ವತ್ತಿನಲ್ಲಿ ಅನುಮತಿ ಇಲ್ಲದೇ ಊಟ ಹಾಕಬಾರದು. ಶಿಕ್ಷಣ ಸಂಸ್ಥೆ, ಕಂಪನಿ ಸೇರಿದಂತೆ ಖಾಸಗಿ ಆವರಣದಲ್ಲಿ ಅನುಮತಿ ಇಲ್ಲದೇ ಆಹಾರ ಹಾಕುವಂತಿಲ್ಲ. ನಾಯಿ ವಾಸಿಸುವ ಪ್ರದೇಶದಲ್ಲಿ ಆಹಾರ ನೀಡಬೇಕು. ನೆರೆ ಹೊರೆಯವರೊಂದಿಗೆ ಜಗಳಕ್ಕೆ ಅವಕಾಶ ನೀಡದಂತೆ ಆಹಾರ ನೀಡಬೇಕು ಎಂದು ಸೂಚಿಸಲಾಗಿದೆ.