ಬೆಂಗಳೂರು(ಜೂ.13): ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು 9 ತಾಸುಗಳಿಂದ 10 ತಾಸುಗಳಿಗೆ ಹೆಚ್ಚಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಕೊರೋನಾ ಬಿಕ್ಕಟ್ಟನ್ನು ‘ಸಾರ್ವಜನಿಕ ತುರ್ತು ಪರಿಸ್ಥಿತಿ’ಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ ರಾಜ್ಯ ಸರ್ಕಾರವು ಕೈಗಾರಿಕೆಗಳ ಕಾಯ್ದೆಯ ಸೆಕ್ಷನ್‌ 5ರಡಿ ಮೇ 22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಒಪ್ಪಿರಲಿಲ್ಲ. ಅಲ್ಲದೆ, ಶುಕ್ರವಾರದೊಳಗೆ ನಿರ್ಧಾರ ಬದಲಿಸದಿದ್ದರೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕಾಗುತ್ತದೆ ಎಂದು ಗುರುವಾರವಷ್ಟೇ ಕಠಿಣ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರವು ಗುರುವಾರ ರಾತ್ರಿಯೇ ಅಧಿಸೂಚನೆ ಹಿಂಪಡೆದಿದ್ದು, ಆ ಕುರಿತ ಮಾಹಿತಿಯನ್ನು ಶುಕ್ರವಾರ ಹೈಕೊರ್ಟ್‌ಗೆ ನೀಡಿತು.

ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ದೀಪಾಂಜಲಿ ನಗರದ ನಿವಾಸಿ ಎಚ್‌. ಮಾರುತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, ಅಧಿಸೂಚನೆ ಹಿಂಪಡೆಯಲಾಗಿದೆ ಎಂದು ತಿಳಿಸಿದರು. ಜತೆಗೆ, ಮೇ 22ರ ಅಧಿಸೂಚನೆ ಹಿಂಪಡೆದು ಕಾರ್ಮಿಕ ಇಲಾಖೆ ಉಪ ಕಾರ್ಯದರ್ಶಿ ಸಂಧ್ಯಾ ಎಲ್‌.ನಾಯಕ್‌ ಹೊರಡಿಸಿದ ಆದೇಶದ ಪ್ರತಿಯನ್ನು ಮೆಮೋ ಸಹಿತವಾಗಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಆಕ್ಷೇಪವೇನಿತ್ತು:

ಕಾರ್ಖಾನೆಗಳ ಕಾಯ್ದೆ-1984ರ ಸೆಕ್ಷನ್‌ 51 ಮತ್ತು 54ರಿಂದ ಎಲ್ಲಾ ಕಾರ್ಖಾನೆಗಳಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ, ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿ 9 ತಾಸುಗಳಿಂದ 10 ತಾಸು ಹಾಗೂ ಒಂದು ವಾರದ ಕೆಲಸದ ಅವಧಿ 48 ತಾಸುಗಳಿಂದ 60 ತಾಸುಗಳಿಗೆ ಹೆಚ್ಚಿಸಿ ಮೇ 22ರಂದು ಅಧಿಸೂಚನೆ ಹೊರಡಿಸಿರುವುದು ಕಾನೂನು ಬಾಹಿರ. ಅದು ಕಾರ್ಮಿಕರ ಹಕ್ಕುಗಳ ಉಲ್ಲಂಘನೆ. ಕೋವಿಡ್‌-19 ಹರಡುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರು ಹೆಚ್ಚಿನ ಸಮಯ ಕೆಲಸ ಮಾಡುವುದು ಅವರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಅಲ್ಲದೆ, ಕೊರೋನಾ ಬಿಕ್ಕಟ್ಟನ್ನು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿರುವುದಾಗಿ ಸರ್ಕಾರ ಹೇಳಿದೆ. ಆದರೆ, ಕಾನೂನು ಪ್ರಕಾರ ಕೊರೋನಾ ಬಿಕ್ಕಟ್ಟು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.