ವೈದ್ಯರಿಂದ ಹಣ ವಸೂಲಿಗೆ ಕಾನೂನು ಬಳಕೆ ಬೇಡ, ಬೆಂಗಳೂರಿನ ನೋವಾ ಆಸ್ಪತ್ರೆ ಕೇಸಲ್ಲಿ ಸೂಚನೆ
ಬೆಂಗಳೂರು(ಅ.09): ಶಿಸ್ತು ಕ್ರಮ ಹೆಸರಿನಲ್ಲಿ ವೈದ್ಯರಿಂದ ಹಣ ವಸೂಲಿ ಮಾಡುವ ಅಸ್ತ್ರವಾಗಿ ವೈದ್ಯರ ವೃತ್ತಿಪರ ದುರ್ನಡತೆ ತಡೆಗೆ ಸಂಬಂಧಿಸಿದ ಕಾನೂನುಗಳನ್ನು ಆಸ್ಪತ್ರೆಗಳು ಸೇರಿದಂತೆ ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಮತ್ತು ದೂರದಾರರು ಬಳಕೆ ಮಾಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವೃತ್ತಿಪರ ದುರ್ನಡತೆ ಆರೋಪದ ಸಂಬಂಧ ಕೆಎಂಟಿ ಮುಂದೆ ಬೆಂಗಳೂರಿನ ನೋವಾ ಮೆಡಿಕಲ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ದಾಖಲಿಸಿದ್ದ ದೂರು ರದ್ದುಗೊಳಿಸುವಂತೆ ಡಾ.ನಾಗೇಶ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?:
ಡಾ.ನಾಗೇಶ್ ಅವರು 2011ರಲ್ಲಿ ನೋವಾ ಮೆಡಿಕಲ್ ಸೆಂಟರ್‌ನಲ್ಲಿ ‘ವಿಸಿಟಿಂಗ್ ಡಾಕ್ಟರ್’ ಆಗಿದ್ದರು. ಪಿ.ಸೌಮ್ಯ ಎಂಬುವರ ಪತಿ ಜಯಪ್ರಕಾಶ್ ಅವರು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ವೈದ್ಯಕೀಯ ಸಂಕೀರ್ಣತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಅವರನ್ನು 2011ರ ಮಾ.29ರಂದು ವರ್ಗಾಯಿಸಿದ್ದರು. ಇದರಿಂದ ಡಾ.ನಾಗೇಶ್ ವಿರುದ್ಧ ಪಿ.ಸೌಮ್ಯ ಅವರು 2011ರ ಅ.2ರಂದು ಕೆಂಗೇರಿ ಠಾಣೆಗೆ ಅಪರಾಧಿಕ ಪ್ರಚೋದನೆ ಮತ್ತು ಗಂಭೀರ ಹಲ್ಲೆ ಆರೋಪದಡಿ ದೂರು ದಾಖಲಿಸಿದ್ದರು.
Xiaomi 5551 ಕೋಟಿ ರೂ. ಜಪ್ತಿ ತಡೆಗೆ ಕರ್ನಾಟಕ ಹೈಕೋರ್ಟ್ ನಕಾರ
2011ರ ಅ.19ರಂದು ಸೌಮ್ಯ ಅವರು ನೋವಾ ಮೆಡಿಕಲ್ ಸೆಂಟರ್‌ಗೆ ತೆರಳಿ, ಖಾಸಗಿ ಆಸ್ಪತ್ರೆಯಲ್ಲಿ ಆಗಿರುವ 40 ಲಕ್ಷ ರು. ಬಿಲ್ ಮರುಪಾವತಿಗೆ ಒತ್ತಾಯಿಸಿದ್ದರು. ನಂತರ ಆ ಹಣ ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದ ನೋವಾ, ಡಾ.ನಾಗೇಶ್‌ಗೆ ಲೀಗಲ್ ನೋಟಿಸ್ ಜಾರಿಗೊಳಿಸಿ ಅಷ್ಟೂಹಣದ ಮರುಪಾವತಿಗೆ ಸೂಚಿಸಿತ್ತು. ಅದಕ್ಕೆ ಡಾ. ನಾಗೇಶ್ ನಿರಾಕರಿಸಿದ್ದರಿಂದ ನೋವಾ, ಕೆಎಂಸಿಗೆ ವೃತ್ತಿಪರ ದುರ್ನಡತೆ ಆರೋಪ ಸಂಬಂಧ ನಾಗೇಶ್ ವಿರುದ್ಧ ದೂರು ದಾಖಲಿಸಿತ್ತು. ಹಾಗಾಗಿ, ನಾಗೇಶ್ ಅವರಿಗೆ ಕೆಎಂಟಿ ನೋಟಿಸ್ ಜಾರಿ ಮಾಡಿದ್ದು, ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನಕಲಿ ಥೆರಪಿಸ್ಟ್‌ಗಳನ್ನು ನಿಯಂತ್ರಿಸಿ: ಹೈಕೋರ್ಟ್
ಆದರೆ, ‘ದೂರಿನಲ್ಲಿ ಯಾವುದೇ ಹುರುಳಿಲ್ಲ. ನಾಗೇಶ್ ವಿರುದ್ಧ ಸೌಮ್ಯ ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅದರಲ್ಲಿ ಪ್ರಕರಣದಲ್ಲಿ ನಾಗೇಶ್ ಕಡೆಯಿಂದ ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ಇಲ್ಲ’ ಎಂಬುದಾಗಿ ಕ್ಲೀನ್‌ಚಿಟ್ ನೀಡಿ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರು ನೀಡಿದ ವರದಿ ಲಗತ್ತಿಸಲಾಗಿದೆ’ ಎಂದು ಹೈಕೋರ್ಟ್ ತಿಳಿಸಿದೆ. ಹಾಗೆಯೇ, ನೋವಾ ಮೆಡಿಕಲ್ ಸೆಂಟರ್ ಮತ್ತು ಸೌಮ್ಯ ಅವರು ಬಯಸಿದರೆ ಪ್ರಕರಣದಲ್ಲಿ ಕಾನೂನು ಪ್ರಕಾರ ಸಿವಿಲ್ ಪರಿಹಾರ ಪಡೆಯಲು ಸ್ವತಂತ್ರರಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ವೈದ್ಯರ ವೃತ್ತಿಪರ ದುರ್ನಡತೆ ಪ್ರಕರಣಗಳಲ್ಲಿ ಕೆಎಂಸಿ ಅಂತಹ ಶಿಸ್ತು ಪ್ರಾಧಿಕಾರ ಬಹಳ ಗಂಭೀರವಾಗಿ ನಡೆದುಕೊಳ್ಳಬೇಕಾಗುತ್ತದೆ. ದೂರು ದಾಖಲಿಸುವ ಮುನ್ನ ಆರೋಪದಲ್ಲಿನ ಸತ್ಯಾಸತ್ಯತೆ ಪರಿಶೀಲಿಸಬೇಕಾಗುತ್ತದೆ. ವೈದ್ಯರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ನಡೆಸುವುದು ಗಂಭೀರ ವಿಚಾರವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ.
