ಬೆಂಗಳೂರು(ಆ.21): ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದರೆ ತನಿಖಾಧಿಕಾರಿಯನ್ನೇ ಬದಲಿಸಲು ನಿರ್ದೆಶಿಸಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ.

ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಡಿಜಿಪಿಗೆ ನಿರ್ದೇಶಿಸುವಂತೆ ಕೋರಿ ಬಸವನಗುಡಿ ನಿವಾಸಿ ಕೆ.ಆರ್‌. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಈ ರೀತಿ ಎಚ್ಚರಿಕೆ ನೀಡಿತು.

ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಅರ್ಜಿದಾರರ ಪರ ವಕೀಲ ವೆಂಕಟೇಶ್‌ ದಳವಾಯಿ ಮಧ್ಯಂತರ ಅರ್ಜಿ ಸಲ್ಲಿಸಿ, ಬ್ಯಾಂಕ್‌ನಿಂದ ಹಣ ಪಡೆದು ಹಿಂದಿರುಗಿಸದ 27 ಗ್ರಾಹಕರ ವಿರುದ್ಧ ಬ್ಯಾಂಕ್‌ ನಿರ್ದೇಶಕರು ಹಾಗೂ ಇತರ ಕೆಲ ಗ್ರಾಹಕರು ಫೆ.24ರಂದು ದೂರು ನೀಡಿದ್ದಾರೆ. ಆದರೆ, ಆ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಗರಣದ ಪ್ರಮುಖ ಆರೋಪಿಯಾಗಿರುವ ಬ್ಯಾಂಕ್‌ ಅಧ್ಯಕ್ಷ ಕಳೆದ ಎರಡೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಈವರೆಗೂ ಪತ್ತೆ ಹಚ್ಚಿಲ್ಲ. ಈ ಮಧ್ಯೆ ವಿಚಾರಣಾ ನ್ಯಾಯಾಲಯ ಆತನ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಪ್ರಮುಖ ಆರೋಪಿಯನ್ನೇ ಇನ್ನೂ ಬಂಧಿಸಿಲ್ಲವೆಂದರೆ ಹೇಗೆ, ಇದೊಂದು ಗಂಭೀರ ಪ್ರಕರಣವಾಗಿದೆ. ಪ್ರಮುಖ ಆರೋಪಿಯೇ ಸಿಕ್ಕಿಲ್ಲ ಎಂದರೆ ತನಿಖೆ ಹೇಗೆ ಮುಂದುವರಿಸಲಾಗುತ್ತದೆ ಎಂದು ಪ್ರಶ್ನಿಸಿತು. ಅಲ್ಲದೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ತನಿಖಾಧಿಕಾರಿಯನ್ನೇ ಬದಲಿಸಬೇಕಾಗುತ್ತದೆ ಎಂದು ಸೂಚಿಸಿತು.

ಬೆಂಗಳೂರು: ರಾಘವೇಂದ್ರ ಬ್ಯಾಂಕ್‌ ವಂಚನೆ ಪ್ರಕರಣ, 11 ಮಂದಿ ಅರೆಸ್ಟ್‌

ವಾದ ಮುಂದುವರೆಸಿದ ವಕೀಲರು, ತಲೆ ಮರೆಸಿಕೊಂಡಿರುವ ಆರೋಪಿ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕಾರಣಿಗಳ ಆಸರೆ ಪಡೆದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.

ವಾದ ಆಲಿಸಿದ ಪೀಠ, 27 ಮಂದಿ ಗ್ರಾಹಕರ ವಿರುದ್ಧ ನೀಡಲಾಗಿರುವ ದೂರಿನ ಸಂಬಂಧ ಕೈಗೊಂಡ ಕ್ರಮವೇನು ಹಾಗೂ ಪ್ರಮುಖ ಆರೋಪಿಯ ಬಂಧನಕ್ಕೆ ಯಾವ ಕ್ರಮ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಅಲ್ಲದೆ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ) ಅಡಿ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಬಗ್ಗೆ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿತು.