ಬೆಂಗಳೂರು(ಆ.15): ನಗರದ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದಲ್ಲಿ ತಮ್ಮ ಹಿತ ರಕ್ಷಣೆ ಮಾಡಿ, ನ್ಯಾಯ ಒದಗಿಸುವಂತೆ ಆಗ್ರಹಿಸಿ ಠೇವಣಿದಾರರು ಬ್ಯಾಂಕ್‌ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕಿನ ಠೇವಣಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಶ್ರೀಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ.

ವೇದಿಕೆ ಅಧ್ಯಕ್ಷ ಕೆ.ವಿ.ಆದಿಶೇಷಯ್ಯ ಹಾಗೂ ಕಾರ್ಯದರ್ಶಿ ಎಚ್‌.ಎನ್‌.ಪದ್ಮರಾವ್‌ ಮಾತನಾಡಿ, ಬ್ಯಾಂಕ್‌ ವಂಚನೆ ಪ್ರಕರಣದಿಂದ ಠೇವಣಿದಾರರಿಗೆ ಬ್ಯಾಂಕುಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಠೇವಣಿದಾರರನ್ನು ವಂಚಿಸಿದವರನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸೂಕ್ತ ನ್ಯಾಯ ಒದಗಿಸಬೇಕು. ಅಲ್ಲಿಯವರೆಗೂ ನಿರಂತರವಾಗಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು: ರಾಘವೇಂದ್ರ ಬ್ಯಾಂಕ್‌ ವಂಚನೆ ಪ್ರಕರಣ, 11 ಮಂದಿ ಅರೆಸ್ಟ್‌

ಹೈಕೋರ್ಟ್‌ಗೆ ಪತ್ರ:

ಈ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ ಬಸವನಗುಡಿಯ ಶ್ರೀರಾಘವೇಂದ್ರ ಸಹಕಾರಿ ಬ್ಯಾಂಕ್‌ ಠೇವಣಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೋರ್ಟ್‌ ನೀಡಿರುವ ಆದೇಶಗಳು ವಿಶ್ವಾಸ ಮೂಡಿಸಿದೆ. ಸಿಐಡಿ ತನಿಖೆ ತನಿಖೆ ಪ್ರಗತಿಯಲ್ಲಿದೆ. ಆದರೆ ವಂಚಕರು ಕೆಲವು ಕಾಣದ ಕೈಗಳ ಪ್ರಭಾವ ಬಳಸಿ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಠೇವಣಿದಾರರು ಸಂಶಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವವರು ತಮ್ಮ ರಕ್ಷಣೆಗಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಹಾಗಾಗಿ ತನಿಖಾಧಿಕಾರಿಗಳು ಅತ್ಯಂತ ಚುರುಕಾಗಿ ಮತ್ತು ಶೀಘ್ರವಾಗಿ ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾಗಿರುವ ಠೇವಣಿದಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.