Asianet Suvarna News Asianet Suvarna News

ದೇಶದಲ್ಲಿಲ್ಲದ ಕಾನೂನಿನಡಿ ಮಗನ 'ಪಾಲನೆ' ಹಂಚಿದ ಹೈ ಕೋರ್ಟ್

ದೇಶದಲ್ಲಿ ಇಲ್ಲದ ಕಾನೂನಿನ ಅಡಿಯಲ್ಲಿ ಡಿವೋರ್ಸ್ ದಂಪತಿಯ ಕೇಸನ್ನು ಹೈ ಕೋರ್ಟ್ ಬಗೆಹರಿಸಿದೆ. 

High court Resolve Divorce Couple Case snr
Author
Bengaluru, First Published Oct 28, 2020, 11:42 AM IST

ವರದಿ : ವೆಂಕಟೇಶ್‌ ಕಲಿಪಿ

 ಬೆಂಗಳೂರು (ಅ.28):  ವಿಚ್ಛೇದಿತ ದಂಪತಿಯು ಮಗನ ಸುಪರ್ದಿಗಾಗಿ ಸುಪ್ರೀಂಕೋರ್ಟ್‌, ಹೈಕೋರ್ಟ್‌ ಮತ್ತು ಕೌಟುಂಬಿಕ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದಲೂ ಕಾನೂನು ಹೋರಾಟ ನಡೆಸುತ್ತಿತ್ತು. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಗಬಾರದು ಎಂಬ ಸದುದ್ದೇಶದಿಂದ ಮಕ್ಕಳ ಪಾಲನೆ ವಿಚಾರದಲ್ಲಿ ವಿದೇಶದಲ್ಲಿ ಪ್ರಚಲಿತದಲ್ಲಿರುವ ಹಾಗೂ ಭಾರತದಲ್ಲಿ ಕಾನೂನಿನ ಮಾನ್ಯತೆ ಇಲ್ಲದ ‘ಪಾಲನೆ ಹಂಚಿಕೆ’ ಎಂಬ ಪದ್ಧತಿಯಲ್ಲಿ ಹೈಕೋರ್ಟ್‌ ಪರಿಹಾರ ನೀಡಿದೆ.

ಪ್ರಕರಣದಲ್ಲಿ ಮಗನಿಗೆ 18 ವರ್ಷ ತುಂಬುವವರೆಗೂ ವಾಸ, ವಿದ್ಯಾಭ್ಯಾಸ, ಖರ್ಚು-ವೆಚ್ಚ, ಹಬ್ಬ ಹರಿದಿನ ಹಾಗೂ ಜನ್ಮದಿನ ಆಚರಣೆ ಸೇರಿದಂತೆ ಮಗನ ಪಾಲನೆ, ಆರೈಕೆ ಮತ್ತು ಬೆಳವಣಿಗೆಯಲ್ಲಿ ತಂದೆ-ತಾಯಿ ಇಬ್ಬರೂ ಸಮಾನ ಜವಾಬ್ದಾರಿ ಹೊರಬೇಕು ಎಂದು ಹೈಕೋರ್ಟ್‌ ಅಪರೂಪದ ತೀರ್ಪು ಪ್ರಕಟಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಪಾಲನೆ ಹಂಚಿಕೆ ಪದ್ಧತಿ ಸಂಬಂಧ ಭಾರತದಲ್ಲಿ ಯಾವುದೇ ಕಾನೂನು ಇಲ್ಲ. ಭಾರತದಲ್ಲಿ ಪಾಲನೆ ಹಂಚಿಕೆ ಪದ್ಧತಿಯನ್ನು ಆಳವಡಿಸಿಕೊಳ್ಳುವ ವಿಚಾರವಾಗಿ ಲಾ ಕಮಿಷನ್‌ ಆಫ್‌ ಇಂಡಿಯಾ ಸಮಾಲೋಚನಾ ವರದಿ ಬಿಡುಗಡೆಗೊಳಿಸಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಅದನ್ನು ಹೊರತುಪಡಿಸಿ ಭಾರತದಲ್ಲಿ ಈ ಪದ್ಧತಿ ಇಲ್ಲ.

ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ಮಗುವಿನ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪಾಲನೆ ಹಂಚಿಕೆ ಪದ್ಧತಿಯಡಿ ನ್ಯಾಯಾಲಯಗಳು ತೀರ್ಪು ನೀಡಿವೆ.

ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ! ...

ತಾಯಿಯ ಸುಪರ್ದಿಗೆ ಸಿಕ್ಕಿದ್ದ ಮಗು:  ಉಷಾ ಮತ್ತು ಕಿರಣ್‌ ದಂಪತಿಗೆ (ಹೆಸರು ಬದಲಿಸಲಾಗಿದೆ) ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯ, ತಾಯಿಯೇ ಅಪ್ರಾಪ್ತ ಮಗನ ಪೋಷಕರಾಗಿರುತ್ತಾರೆ. ಆಕೆಯ ಸುಪರ್ದಿಯಲ್ಲಿ ಮಗು ಇರಬೇಕು. ಕೆಲವೊಂದು ಷರತ್ತಿನ ಮೇಲೆ ತಂದೆ ಭೇಟಿ ಮಾಡಲು ಹಕ್ಕು ಹೊಂದಿರುತ್ತಾರೆ ಎಂದು 2014ರ ನ.21ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ 2015ರಲ್ಲಿ ಮಗುವಿನ ತಂದೆ ಹಾಗೂ ತಾಯಿ ಇಬ್ಬರೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್‌.ಸಂಜಯ್‌ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ, ಪಾಲನೆಯ ಹಂಚಿಕೆ ಪರಿಕಲ್ಪನೆಯಡಿ 21 ನಿರ್ದೇಶನಗಳನ್ನು ನೀಡಿ ಅಪ್ರಾಪ್ತ ಮಗನ ಪಾಲನೆ ಹಾಗೂ ಆರೈಕೆಯ ಹಕ್ಕನ್ನು ಪೋಷಕರಿಬ್ಬರಿಗೂ ಸಮಾನವಾಗಿ ಹಂಚಿದೆ.

ಮಗನನ್ನು ಹೇಗೆ ಸಾಕಬೇಕು? ಹೈಕೋರ್ಟ್‌ನಿಂದ ನಿರ್ದೇಶನ

- ಶೈಕ್ಷಣಿಕ ವರ್ಷ ಹತ್ತು ತಿಂಗಳು ಇದ್ದರೆ, ಅದರಲ್ಲಿ ಐದು ತಿಂಗಳು ತಾಯಿಯ ಜತೆಗೆ, ಉಳಿದ ಐದು ತಿಂಗಳು ತಂದೆಯೊಂದಿಗೆ ಮಗು ವಾಸ ಮಾಡಬೇಕು. ಬೇಸಿಗೆ ರಜೆ, ದಸರಾ ರಜೆ ದಿನಗಳಲ್ಲಿ ಶೇ.50ರಷ್ಟುದಿನ ತಂದೆ ಜೊತೆಗೆ, ಉಳಿದ ಶೇ.50ರಷ್ಟುದಿನ ತಾಯಿಯೊಂದಿಗೆ ಮಗು ಕಳೆಯಬೇಕು. ತಾಯಿಯೊಂದಿಗೆ ಮಗು ವಾಸವಾಗಿರುವಾಗ ತಂದೆ, ತಂದೆಯೊಂದಿಗೆ ವಾಸವಾಗಿರುವಾಗ ತಾಯಿ ಮಗುವನ್ನು ಎರಡು ವಾರಗಳಿಗೆ ಒಮ್ಮೆ ಭೇಟಿ ಮಾಡುವ ಹಕ್ಕು ಹೊಂದಿರುತ್ತಾರೆ.

- ಮಗುವಿನ ಮುಂದೆ ಪೋಷಕರು ಪರಸ್ಪರ ಆರೋಪ ಮಾಡಬಾರದು. ಮಗುವಿನ ಆರೋಗ್ಯ, ಶಾಲೆ, ವ್ಯಾಸಂಗ ಮತ್ತು ಪಠ್ಯೇತರ ಚಟುವಟಿಕೆಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪೋಷಕರು ವಿನಿಮಯ ಮಾಡಿಕೊಳ್ಳಬೇಕು. ಮಗು ವಾಸ ಮಾಡಲು ಯೋಗ್ಯವಾದ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಯಾವುದೇ ಅಹಿತಕರ ಸನ್ನಿವೇಶಕ್ಕೆ ಅವಕಾಶ ಮಾಡಿಕೊಡಬಾರದು.

- ಮಗುವಿನ ದೈಹಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಗೆ ಪೋಷಕರು ಜಂಟಿಯಾಗಿ ಶ್ರಮಿಸಬೇಕು. ಮಗುವಿನ ಶಾಲೆ ಅಥವಾ ತಾಯಿ ಮನೆಯ ಸಮೀಪವೇ ತಂದೆ ಮನೆ ಮಾಡಬೇಕು. ಅಲ್ಲಿಯವರೆಗೂ ತಾಯಿಯ ಮನೆಯಲ್ಲಿ ಮಗು ಇರಬೇಕು. ಆಗ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ವಾರದ ಶುಕ್ರವಾರ ರಾತ್ರಿ 8ರಿಂದ ಭಾನುವಾರ ರಾತ್ರಿ 8ರವರೆಗೆ ಮಗನ ಜೊತೆ ತಂದೆ ಸಮಯ ಕಳೆಯಬಹುದು.

Follow Us:
Download App:
  • android
  • ios