Asianet Suvarna News Asianet Suvarna News

ಶವ ಸಂಭೋಗಕ್ಕೆ ಕಠಿಣ ಶಿಕ್ಷೆ: ಕೇಂದ್ರಕ್ಕೆ ಹೈಕೋರ್ಟ್‌ ಶಿಫಾರಸು

ಈ ಪ್ರಕರಣದಲ್ಲಿ ಅತ್ಯಾಚಾರ ಕೇಸಿನಡಿ ಶಿಕ್ಷೆಗೆ ಅವಕಾಶವಿಲ್ಲ, ಹೀಗಾಗಿ ಐಪಿಸಿ ಸೆಕ್ಷನ್‌ 377 ತಿದ್ದುಪಡಿಗೆ ಹೈಕೋರ್ಟ್‌ ಶಿಫಾರಸು

High Court Recommend to Central Government for Severe Punishment for Intercourse with Corpse grg
Author
First Published Jun 1, 2023, 8:11 AM IST

ಬೆಂಗಳೂರು(ಜೂ.01): ಮೃತದೇಹಗಳ ಮೇಲೆ ಸಂಭೋಗ ನಡೆಸುವವರಿಗೆ ಅತ್ಯಾಚಾರ ಪ್ರಕರಣದಡಿ ಶಿಕ್ಷೆ ವಿಧಿಸುವ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಇಂತಹ ಅಪರಾಧ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸಲು ಅವಕಾಶವಾಗುವ ರೀತಿಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 377ಕ್ಕೆ (ಅಸ್ವಾಭಾವಿಕ ಅಪರಾಧಗಳು) ತಿದ್ದುಪಡಿ ಮಾಡಬೇಕು ಅಥವಾ ಹೊಸ ನಿಬಂಧನೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಶಿಫಾರಸು ಮಾಡಿದೆ.

ಯುವತಿಯೊಬ್ಬಳನ್ನು ಹತ್ಯೆಗೈದು, ಆಕೆಯ ಮೃತದೇಹದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೋಳಿಗೇನಹಳ್ಳಿ ನಿವಾಸಿ ರಂಗರಾಜು ಅಲಿಯಾಸ್‌ ವಾಜಪೇಯಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಈ ಶಿಫಾರಸು ಮಾಡಿದೆ.

ಡ್ರಗ್ಸ್ ನಶೆಯಲ್ಲಿ ಪತ್ನಿ-ನಾದಿನಿ ಕೊಂದು ಶವಸಂಭೋಗ ಮಾಡಿದ!

ಯುವತಿಯನ್ನು ರಂಗರಾಜು ಕೊಲೆ ಮಾಡಿರುವುದನ್ನು ಪ್ರಾಸಿಕ್ಯೂಷನ್‌ ಸಂಶಯಾತೀತವಾಗಿ ಸಾಬೀತುಪಡಿಸಿದೆ. ಇದರಿಂದ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ. ಆದರೆ, ಐಪಿಸಿ ಸೆಕ್ಷನ್‌ 375 ಮತ್ತು 376ರಲ್ಲಿ ಮೃತದ ದೇಹವನ್ನು ಮನುಷ್ಯ ಅಥವಾ ವ್ಯಕ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ರಂಗರಾಜುಗೆ ಅತ್ಯಾಚಾರ ಪ್ರಕರಣ ಅನ್ವಯಿಸುವುದಿಲ್ಲ. ಈ ಪ್ರಕರಣವನ್ನು ಕ್ರೌರ್ಯ ರತಿ (ಸ್ಯಾಡಿಸಂ) ಮತ್ತು ಶವಗಳ ಮೇಲಿನ ಸಂಭೋಗ (ನೆಕ್ರೋಫಿಲಿಯಾ) ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಹಾಗಾಗಿ, ಯುವತಿಯ ಮೃತದೇಹದ ಜೊತೆ ಸಂಭೋಗ ನಡೆಸಿರುವುದಕ್ಕೆ ಅತ್ಯಾಚಾರ ಅಪರಾಧ (ಐಪಿಸಿ ಸೆಕ್ಷನ್‌ 376) ಅಡಿ ವಿಧಿಸಲಾಗಿದ್ದ 10 ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ತಿದ್ದುಪಡಿ ತನ್ನಿ:

ಮೃತದೇಹದ ಮೇಲೆ ಸಂಭೋಗ ನಡೆಸಿದಂತಹ ಪ್ರಕರಣದಲ್ಲಿ ಅತ್ಯಾಚಾರ ಅಪರಾಧದಡಿ ಅಪರಾಧಿಗೆ ಶಿಕ್ಷೆ ವಿಧಿಸಲು ಯಾವುದೇ ನಿಯಮಗಳು ಇಲ್ಲ. ಐಪಿಸಿ ಸೆಕ್ಷನ್‌ 377 ಅಡಿಯಲ್ಲಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೇಲೆ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ಈ ಸೆಕ್ಷನ್‌ಗೆ ತಿದ್ದುಪಡಿ ತಂದು ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೃತದೇಹ ಎಂಬುದಾಗಿ ಸೇರಿಸುವುದಕ್ಕೆ ಇದು ಸಕಾಲವಾಗಿದೆ. ಇಲ್ಲವೇ, ಇಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಐಪಿಸಿಯಲ್ಲಿ ಹೊಸ ನಿಯಮವನ್ನು ರೂಪಿಸಬೇಕು. ಇದರಿಂದ ಮೃತದೇಹ ಘನತೆ ರಕ್ಷಣೆ ಮಾಡಿದಂತಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಕೇಂದ್ರಕ್ಕೆ ಆರು ತಿಂಗಳ ಗಡುವು:

ಕೆನಡಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಮಹಿಳೆಯ ಮೃತದೇಹದ ಮೇಲೆ ಎಸಗುವ ಅಪರಾಧವು ಶಿಕ್ಷಾರ್ಹವಾಗಿದೆ. ಅಂತಹ ನಿಯಮಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕಿದೆ. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಆರು ತಿಂಗಳ ಒಳಗೆ ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಶಿಫಾರಸು ಮಾಡಿದೆ.

ಪ್ರಕರಣವೇನು?

ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಗೋಳಿಗೇನಹಳ್ಳಿಯ 21 ವರ್ಷದ ಯುವತಿಯನ್ನು ಅದೇ ಗ್ರಾಮದ ರಂಗರಾಜು (ಅಪರಾಧಿ) 2015ರ ಜೂ.25ರಂದು ಕತ್ತುಸೀಳಿ ಕೊಲೆ ಮಾಡಿದ್ದ. ಇದಾದ ಬಳಿಕ ಸಂತ್ರಸ್ತೆ ಮೃತ ದೇಹದ ಜೊತೆಗೆ ಸಂಭೋಗ ನಡೆಸಿದ್ದ. ಸಂತ್ರಸ್ತೆಯ ಸಹೋದರ ಈ ಬಗ್ಗೆ ದೂರು ನೀಡಿದ್ದ ಅಧೀನ ನ್ಯಾಯಾಲಯವು ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರು. ದಂಡ, ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ರಂಗರಾಜು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ. ರಂಗರಾಜು ಪರ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ ಅವರು ವಾದ ಮಂಡಿಸಿದ್ದರು.

ಶವಾಗಾರಗಳಲ್ಲಿ ಸಿಸಿಟೀವಿ: ರಾಜ್ಯಕ್ಕೆ ಹೈಕೋರ್ಟ್‌ ಶಿಫಾರಸು

ಆಸ್ಪತ್ರೆಯ ಶವಾಗಾರಗಳಲ್ಲಿ ಸುಂದರ ಹೆಣ್ಣುಮಕ್ಕಳ ಶವ ಇದ್ದರೆ, ಅವುಗಳ ಮೇಲೆ ಅಲ್ಲಿನ ಸಿಬ್ಬಂದಿ ಅತ್ಯಾಚಾರ ನಡೆಸುತ್ತಾರೆ ಎಂಬ ಮಾಹಿತಿ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ, ಮಹಿಳೆಯ ಮೃತದೇಹದ ಮೇಲೆ ನಡೆಯುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆರು ತಿಂಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶಿಫಾರಸು ಮಾಡಿದೆ.

ಹಾಸನದಲ್ಲೊಬ್ಬ ಕ್ರೂರ ಶವಸಂಭೋಗಿ! ಈ ಸೈಕೋ ಎಂಥವನು?

ಮೃತರ ಮಾಹಿತಿಯನ್ನು ಮುಖ್ಯವಾಗಿ ಎಚ್‌ಐವಿ, ಆತ್ಮಹತ್ಯೆ ಪ್ರಕರಣಗಳ ಮಾಹಿತಿಯನ್ನು ಗೌಪ್ಯ ಮತ್ತು ಭದ್ರವಾಗಿಡಬೇಕು. ಶವಪರೀಕ್ಷೆ ನಡೆಸುವ ಕೋಣೆಗಳು ಸಾರ್ವಜನಿಕರ ನೇರ ದೃಷ್ಟಿಗೆ ಬೀಳುವಂತಿರಬಾರದು. ಅವುಗಳಿಗೆ ಪರದೆ ಅಳವಡಿಸಬೇಕು. ಶವಪರೀಕ್ಷಾ ಕೇಂದ್ರಗಳನ್ನು ನಿಷೇಧಿತ ಪ್ರದೇಶವಾಗಿ ನಿರ್ವಹಿಸಬೇಕು.

ಭಾರತೀಯ ಸಾರ್ವಜನಿಕ ಪ್ರಮಾಣಿಕೃತ ಮಾನದಂಡಗಳಿಗೆ (ಐಎಸ್‌ಐ) ಅನುಗುಣವಾಗಿ ಶವ ನಿರ್ವಹಣೆಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಬೇಕು. ಶವಾಗಾರದ ಆಡಳಿತವು ಸಿಬ್ಬಂದಿಗೆ ಶವಗಳ ನಿರ್ವಹಣೆ ಮತ್ತು ಮೃತರ ಸಂಬಂಧಿಕರೊಂದಿಗೆ ಸಂವೇದನಾಶೀಲವಾಗಿ ವ್ಯವಹರಿಸಲು ಕಾಲಕಾಲಕ್ಕೆ ತರಬೇತಿ ನೀಡಬೇಕು.

Follow Us:
Download App:
  • android
  • ios