ಸಾರಿಗೆ ನೌಕರರು ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನ ವಿಫಲದ ಬೆನಲ್ಲೇ ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ನೌಕರರಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳೆಯ ವರೆಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ. 

ಬೆಂಗಳೂರು (ಆ.04) ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿದೆ. ಹೀಗಾಗಿ ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ನಡೆಸಲು ಎಲ್ಲಾ ತಯಾರಿ ನಡೆದಿತ್ತು. ಈ ತಯಾರಿ ನಡುವೆ ಸಾರಿಗೆ ನೌಕರರಿಗೆ ಹೈಕೋರ್ಟ್ ಶಾಕ್ ನೀಡಿದೆ. ನಾಳೆಯ ವರೆಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ಆದೇಶ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್ ರಿಲೀಫ್ ಕೊಟ್ಟಿದೆ. ನಾಳೆ ಒಂದು ದಿನ ಮುಷ್ಕರ ನಡೆಸದಂತೆ ಕೋರ್ಟ್ ಸೂಚಿಸಿದೆ. ಹೀಗಾಗಿ ನಾಳೆ ಒಂದು ದಿನ ಸಾರಿಗೆ ಬಸ್ ಲಭ್ಯವಿದೆ.

ಸಾರಿಗೆ ನೌಕರರ ಮುಷ್ಕರ ಕುರಿತು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆದಿತ್ತು. ಒಂದೆಡೆ ಸಿಎಂ ಸಿದ್ದರಾಮಯ್ಯ ನೌಕರರ ಜೊತೆ ಸಂಧಾನ ಮಾತುಕತೆ ನಡೆಸಿದ್ದರು. ಈ ವೇಳೆ ಬಾಕಿ ವೇತನ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದರು. ಇತ್ತ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಭಾರಿ ಮಹತ್ವ ಪಡೆದುಕೊಂಡಿತ್ತು. ನ್ಯಾ.ಕೆ ಎಸ್ ಮುದಗಲ್ ಮತ್ತು ಎಂ.ಜಿ.ಎಸ್ ಕಮಲ್ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಯಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ಪ್ರಕಾರ ನಾಳೆ ಒಂದು ದಿನ ಮುಷ್ಕರ ನಡೆಸದಂತೆ ಕೋರ್ಟ್ ಸೂಚಿಸಿದೆ.

ನಾಳೆ ಸಾರಿಗೆ ಬಸ್ ಲಭ್ಯ

ನಾಳೆ ಒಂದು ದಿನ ಸಾರಿಗೆ ಬಸ್ ಸೇವೆ ಲಭ್ಯವಾಗಲಿದೆ. ಹೈಕೋರ್ಟ್ ಆದೇಶದಿಂದ ಇದೀಗ ಸಾರಿಗೆ ನೌಕರರು ಆಗಸ್ಟ್ 6 ರಿಂದ ಮುಷ್ಕರ ಆರಂಭಿಸಲು ಮುಂದಾಗಿದ್ದಾರೆ. ಆಗಸ್ಟ್ 5 ರಿಂದು ಮುಷ್ಕರ ಘೋಷಣೆಯಾಗಿತ್ತು. ಇತ್ತ ಸಂಧಾನ ಸಭೆಯೂ ವಿಫಲಗೊಂಡಿತ್ತು. ಆದರೆ ಹೈಕೋರ್ಟ್ ಆದೇಶದಿಂದ ಇದೀಗ ಒಂದು ದಿನ ತಡವಾಗಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಆದರೆ ನಾಳೆ ಮತ್ತೊಂದು ಸುತ್ತಿನ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ.

ಸಾರಿಗೆ ನಿಗಮ ಪರ ವಕೀಲರ ವಾದನವೇನು

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸಾರಿಗೆ ನಿಗಮ ಪರ ವಕೀಲರ ವಾದ ಮಂಡಿಸಿದ್ದಾರೆ. ನಾಳೆಯಿಂದ ಮುಷ್ಕರ ನಡೆಸಲು ಸಂಘಟನೆಗಳು ಮುಂದಾಗಿವೆ. ಈ ಹಿಂದೆ ಮುಷ್ಕರ ನಡೆಸಿದಾಗ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಬೇಡಿಕೆಯಿಂದ 2200 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ವಕೀಲರು ಕೋರ್ಟ್ ಮುಂದೆ ಹೇಳಿದ್ದಾರೆ.