ಬೆಂಗಳೂರು (ಮೇ.13):  ರಾಜ್ಯದ ಆಮ್ಲಜನಕದ ಪಾಲು ನಿಗದಿಯಾಗಿದ್ದರೂ ಕೇಂದ್ರ ಸರ್ಕಾರ ಅಷ್ಟೂಪ್ರಮಾಣದ ಆಮ್ಲಜನಕ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಲಭಿಸುತ್ತಿರುವ ಆಮ್ಲಜನಕವನ್ನೇ ವ್ಯವಸ್ಥಿತ ರೀತಿಯಲ್ಲಿ ಬಳಸಿಕೊಳ್ಳಲು ಮಾರ್ಗಸೂಚಿ ರೂಪಿಸಿದೆ.

ಪೂರೈಕೆ ಹೆಚ್ಚಾಗಿಲ್ಲದಿದ್ದರೂ ಬಿಬಿಎಂಪಿ ಮತ್ತು ಜಿಲ್ಲೆಗಳಲ್ಲಿನ ಆಸ್ಪತ್ರೆಗಳು ಆಮ್ಲಜನಕ ಉಳ್ಳ ಹಾಸಿಗೆಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಲು ಇದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಪೂರೈಕೆಯ ಮಿತಿಯೊಳಗೆಯೇ ಆಸ್ಪತ್ರೆಗಳು ಆಮ್ಲಜನಕ ಬಳಸಬೇಕು ಎಂದು ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.

DRDO ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್! .

ಸರ್ಕಾರ ಸೂಚಿಸಿದ ಮಾರ್ಗಸೂಚಿ ಪ್ರಕಾರ ರೋಗಿಗಳಿಗೆ ಆಮ್ಲಜನಕ ನೀಡಬೇಕು, ಆಕ್ಸಿಜನ್‌ ಆಡಿಟ್‌ ಮಾಡಿ ನಿಯಮ ಮೀರುತ್ತಿರುವ ಆಸ್ಪತ್ರೆಗಳನ್ನು ಪತ್ತೆ ಹಚ್ಚಬೇಕು.ದೈನಂದಿನ ಪೂರೈಕೆ ಹೆಚ್ಚಾಗದೇ ಆಮ್ಲಜನಕಯುಕ್ತ ಬೆಡ್‌ ಸಂಖ್ಯೆ ಹೆಚ್ಚಿಸಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿನ ಆಮ್ಲಜನಕದ ಪೂರೈಕೆಯ ಸ್ಥಿತಿ ಸುಧಾರಿಸಿಲ್ಲ. ಸರ್ಕಾರದ ನಿಯಮ ಪಾಲನೆ ಮಾಡಲು ಮುಂದಾದರೆ ನಮ್ಮಲ್ಲಿರುವ ಶೇ.70 ರೋಗಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರ ನಮ್ಮೊಂದಿಗೆ ಸಹಕರಿಸುತ್ತಿಲ್ಲ, ನಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನಸಿಂಗ್‌ ಹೋಮ್ಸ್‌ಗಳ ಒಕ್ಕೂಟ (ಫನಾ)ದ ಅಧ್ಯಕ್ಷ ಎಚ್‌.ಎಂ. ಪ್ರಸನ್ನ ಹೇಳುತ್ತಾರೆ.

ಕೇಂದ್ರದ ಪಾಲು ಇನ್ನೂ ಸಿಕ್ಕಿಲ್ಲ

ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಆಧಾರದಲ್ಲಿ ಸದ್ಯಕ್ಕೆ ದಿನಕ್ಕೆ 1,500 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕು. ಕರ್ನಾಟಕಕ್ಕೆ 1,200 ಮೆಟ್ರಿಕ್‌ ಟನ್‌ ಆಮ್ಲಜನಕ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶವಿದೆ. ಕೇಂದ್ರ ಸರ್ಕಾರ ಮೇ 11 ರಿಂದ ಪ್ರತಿದಿನದ ಕೋಟಾವನ್ನು 1,015 ಮೆಟ್ರಿಕ್‌ ಟನ್‌ಗೆ ಏರಿಸಿದೆ. ಮೇ 11ರವರಗೆ ಪ್ರತಿದಿನದ ಕೋಟಾ 950 ಮೆಟ್ರಿಕ್‌ ಟನ್‌ ಆಮ್ಲಜನಕವಾಗಿದ್ದರೂ ರಾಜ್ಯಕ್ಕೆ ಲಭ್ಯವಾಗಿದ್ದು 750-800 ಮೆಟ್ರಿಕ್‌ ಟನ್‌ ಮಾತ್ರ. ಆಂದರೆ ರಾಜ್ಯದ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ದೊಡ್ಡ ಅಂತರವೇ ಇದೆ. ಆದ್ದರಿಂದ ಕೇಂದ್ರ ತನ್ನ ಕೋಟಾ ಹೆಚ್ಚಿಸಿದರೂ ಕೂಡ ಅಷ್ಟೂಪ್ರಮಾಣದ ಆಮ್ಲಜನಕ ಲಭ್ಯವಾಗುವುದು ಕಷ್ಟ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona