Asianet Suvarna News Asianet Suvarna News

ಪರೀಕ್ಷಾ ಶುಲ್ಕ ಕಟ್ಟಲಾಗದ ವಿದ್ಯಾರ್ಥಿಗೆ ಹೈಕೋರ್ಟ್ ನೆರವು!

ಬಡತನದ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸಲಾಗದೆ ಆಟೋಮೊಬೈಲ್ಸ್‌ ಡಿಪ್ಲೊಮಾ ಕೋರ್ಸ್‌ನ ಮೂರನೇ ಸೆಮಿಸ್ಟರ್‌ ಪರೀಕ್ಷೆ ಬರೆಯುವ ಅವಕಾಶವನ್ನು ನಗರದ ಬೃಂದಾವನ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಮೊಹಮ್ಮದ್‌ ಮುಸ್ತಫಾ ಕಳೆದುಕೊಂಡಿದ್ದ. ಆದರೆ ಆತನಿಗೆ ಹೈಕೋರ್ಟ್‌ ಸಹಾಯ ಹಸ್ತ ನೀಡಿದೆ.

High Court of Karnataka Payed The Exam Fees Of A Poor Student
Author
Bangalore, First Published Nov 15, 2018, 7:47 AM IST

ಬೆಂಗಳೂರು[ನ.15]: ಬಡತನದಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಲಾಗದೆ ಎಂಜಿನಿಯರಿಂಗ್‌ ಕೋರ್ಸ್‌ ಮುಂದುವರಿಸುವ ಹಾಗೂ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದ ವಿದ್ಯಾರ್ಥಿಯ ನೆರವಿಗೆ ನಿಲ್ಲುವ ಮೂಲಕ ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ಬಡತನದ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸಲಾಗದೆ ಆಟೋಮೊಬೈಲ್ಸ್‌ ಡಿಪ್ಲೊಮಾ ಕೋರ್ಸ್‌ನ ಮೂರನೇ ಸೆಮಿಸ್ಟರ್‌ ಪರೀಕ್ಷೆ ಬರೆಯುವ ಅವಕಾಶವನ್ನು ನಗರದ ಬೃಂದಾವನ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಮೊಹಮ್ಮದ್‌ ಮುಸ್ತಫಾ ಕಳೆದುಕೊಂಡಿದ್ದ. ಆದರೆ ಆತನಿಗೆ ಹೈಕೋರ್ಟ್‌ ಸಹಾಯ ಹಸ್ತ ನೀಡಿದೆ.

ನಿಗದಿತ ಸಮಯದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯಾರ್ಥಿ ತನ್ನ ಕೋರ್ಸ್‌ ಮುಂದುವರಿಸುವ ಹಾಗೂ ಪರೀಕ್ಷೆ ಬರೆಯುವ ಹಕ್ಕು ಕಳೆದುಕೊಳ್ಳುತ್ತಾನೆ. ಆದರೆ, ನಮ್ಮಂತಹ ದೇಶದಲ್ಲಿ ಒಂದು ವರ್ಗದ ಜನ ಬಡತನದಿಂದ ಕಷ್ಟಎದುರಿಸುತ್ತಿದ್ದಾರೆ. ಜಾಲಿ ಜಾಜ್‌ರ್‍ ವರ್ಗೀಸ್‌ ಮತ್ತು ಬ್ಯಾಂಕ್‌ ಆಫ್‌ ಕೊಚ್ಚಿನ್‌ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದಂತೆ ಯಾವೊಬ್ಬ ವ್ಯಕ್ತಿಯೂ ಬಡತನದಿಂದ ಶಿಕ್ಷೆ ಅನುಭವಿಸಬಾರದು. ಹೀಗಾಗಿ, ವಿದ್ಯಾರ್ಥಿಯಿಂದ ಶುಲ್ಕ ಪಡೆದು 3ನೇ ಸೆಮಿಸ್ಟರ್‌ನ ಎಲ್ಲಾ ವಿಷಯಗಳ ಪರೀಕ್ಷೆ ಬರೆಯಲು ಮತ್ತು ಇತರೆ ಯಾವುದೇ ಅಡಚಣೆ ಹಾಗೂ ಅನರ್ಹತೆಗಳಿಲ್ಲದ ಪರಿಸ್ಥಿತಿಯಲ್ಲಿ ಕೋರ್ಸ್‌ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜಿಗೆ ನಿರ್ದೇಶಿಸಿದೆ.

ಸರ್ಕಾರದ ವಿರೋಧ

ಬೆಂಗಳೂರಿನ ಜೆ.ಸಿ.ನಗರದ ನಿವಾಸಿ ಮೊಹಮ್ಮದ್‌ ಮುಸ್ತಫಾ (18), ದ್ವಾರಕಾನಗರದ ಬೃಂದಾವನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಟೋಮೊಬೈಲ್ಸ್‌ ಡಿಪ್ಲೋಮಾ ಕೋರ್ಸ್‌ನ 3ನೇ ಸೆಮಿಸ್ಟರ್‌ ವ್ಯಾಸಂಗ ಮಾಡುತ್ತಿದ್ದಾನೆ. ನಿಗದಿತ ಸಮಯಕ್ಕೆ ಶುಲ್ಕ ಪಾವತಿಸದ ಕಾರಣ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿರಲಿಲ್ಲ. ಹೀಗಾಗಿ, ವಿದ್ಯಾರ್ಥಿ ಹೈಕೋರ್ಟ್‌ ಮೊರೆ ಹೋಗಿದ್ದ.

ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಪರ ಸರ್ಕಾರಿ ವಕೀಲರು ವಾದಿಸಿ, ನಿಗದಿಪಡಿಸಿದ ಸಮಯದಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಪರೀಕ್ಷೆ ಬರೆಯಲು ಹಾಗೂ ಕೋರ್ಸ್‌ ಮುಂದುವರಿಸಲು ವಿದ್ಯಾರ್ಥಿ ಅರ್ಹನಾಗಿಲ್ಲ. ದಂಡ ಸಹಿತ ಶುಲ್ಕ ಪಾವತಿಸುವ ಕೊನೆ ದಿನಾಂಕವೂ ಮುಗಿದಿದ್ದು, ವಿದ್ಯಾರ್ಥಿಗೆ ಯಾವುದೇ ಪರಿಹಾರ ಕಲ್ಪಿಸಲಾಗದು ಎಂದಿದ್ದಾರೆ.

ವಾರ್ಷಿಕ ಆದಾಯ 22 ಸಾವಿರ ರೂಪಾಯಿ:

ವಿದ್ಯಾರ್ಥಿ ಪರ ವಕೀಲರು ವಾದ ಮಂಡಿಸಿ, ಮೊಹಮ್ಮದ್‌ ಅವರದ್ದು ಬಡ ಕುಟುಂಬ. ಆತನ ಕುಟುಂಬದ ವಾರ್ಷಿಕ ಆದಾಯವೇ ಕೇವಲ 22 ಸಾವಿರ ರೂಪಾಯಿ ಆಗಿದೆ ಎಂದು ತಿಳಿಸಿ, ಸಂಬಂಧಪಟ್ಟಇಲಾಖೆಯಿಂದ ಅಧಿಕೃತವಾಗಿ ಪಡೆದುಕೊಂಡ ಆದಾಯ ಹಾಗೂ ಜಾತಿ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದರು. ಹಾಗೆಯೇ, ಬಡತನದಿಂದಾಗಿ ಸರಿಯಾದ ಸಮಯಕ್ಕೆ ಶುಲ್ಕ ಪಾವತಿಸಲು ವಿದ್ಯಾರ್ಥಿಗೆ ಸಾಧ್ಯವಾಗಲಿಲ್ಲ. ಸದ್ಯ ದಂಡ ಸಹಿತ ಶುಲ್ಕ ಪಾವತಿಸಲು ಸಿದ್ಧನಿದ್ದು, ಆತನಿಂದ ಶುಲ್ಕ ಪಡೆದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸರ್ಕಾರ ಹಾಗೂ ಕಾಲೇಜಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಅಲ್ಲದೆ, ಶುಲ್ಕ ಪಾವತಿಸಲು ವಿದ್ಯಾರ್ಥಿಗೆ ಅನುಮತಿ ನೀಡದಿದ್ದರೆ, ಆತ ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುತ್ತಾನೆ. ಅದು ವಿದ್ಯಾರ್ಥಿಯನ್ನು ಮತ್ತಷ್ಟುಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ ಹಾಗೂ ಅನ್ಯಾಯ ಮಾಡಿದಂತಾಗುತ್ತದೆ. ಅದೇ ವಿದ್ಯಾರ್ಥಿಗೆ ಶುಲ್ಕ ಪಾವತಿಸಲು ಅನುಮತಿ ನೀಡಿದರೆ, ಆತ ತನ್ನ ಮುಂದಿನ ಅಧ್ಯಯನ ಮುಂದುವರಿಸಲು ಅನುವಾಗುತ್ತದೆ. ಇದರಿಂದ ತಾಂತ್ರಿಕ ಶಿಕ್ಷಣ ಇಲಾಖೆಗಾಗಲಿ ಅಥವಾ ಕಾಲೇಜಿಗಾಗಲಿ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಈ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಮೇಲಿನಂತೆ ಆದೇಶಿಸಿದ್ದಾರೆ.

Follow Us:
Download App:
  • android
  • ios