ಗೃಹಿಣಿಯ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಚಿತ್ರದುರ್ಗ ಹಿರಿಯೂರು ತಾಲೂಕಿನ ನಿವಾಸಿಗಳಾದ ತಿಪ್ಪೇಸ್ವಾಮಿ ಹಾಗೂ ಅವರ ತಂದೆ-ತಾಯಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.

ಬೆಂಗಳೂರು(ಜು.09): ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹತೆ ಮತ್ತು ಸಂಶಯಾತೀತವಾಗಿರಬೇಕಾದರೆ ಮೃತರು ಮರಣಪೂರ್ವ ಹೇಳಿಕೆ ದಾಖಲಿಸಲು ಮಾನಸಿಕವಾಗಿ ಸದೃಢರಾಗಿದ್ದಾರೆ ಎಂಬುದನ್ನು ವೈದ್ಯರು ದೃಢೀಕರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಗೃಹಿಣಿಯ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಚಿತ್ರದುರ್ಗ ಹಿರಿಯೂರು ತಾಲೂಕಿನ ನಿವಾಸಿಗಳಾದ ತಿಪ್ಪೇಸ್ವಾಮಿ ಹಾಗೂ ಅವರ ತಂದೆ-ತಾಯಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.

ಲೈಂಗಿಕ ಸಂಬಂಧ ಹೊಂದಿ ಮಾತು ತಪ್ಪಿದರೆ ರೇಪ್‌ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಲ್ಲದೆ, ಪ್ರಕರಣದಲ್ಲಿ ಕೊಲೆಗೀಡಾದ ಮಂಜಮ್ಮ ನೀಡಿದ್ದ ಮರಣಪೂರ್ವ ಹೇಳಿಕೆ ಸಂಶಯಾತೀತವಾಗಿಲ್ಲ ಎಂದು ತೀರ್ಮಾನಿಸಿದ ನ್ಯಾಯಪೀಠ, ಮೇಲ್ಮನವಿದಾರನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿದೆ.

ಪ್ರಕರಣವೇನು?:

ಮಂಜಮ್ಮ ಮತ್ತು ತಿಪ್ಪೇಸ್ವಾಮಿ 2010ರ ಜೂ.5ರಂದು ಮದುವೆಯಾಗಿದ್ದರು. ಆ ವೇಳೆ ತಿಪ್ಪೇಸ್ವಾಮಿ 12 ಸಾವಿರ ರು. ವರದಕ್ಷಿಣೆ ಪಡೆದಿದ್ದರು. ತದ ನಂತರವೂ ಹೆಚ್ಚುವರಿಯಾಗಿ 25 ಸಾವಿರ ರು. ವರದಕ್ಷಿಣೆ ತರುವಂತೆ ಮಂಜಮ್ಮಗೆ ಪತಿ ತಿಪ್ಪೇಸ್ವಾಮಿ, ಆತನ ತಂದೆ ನಾಗೇಂದ್ರಪ್ಪ ಹಾಗೂ ತಾಯಿ ಜಯಮ್ಮ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು. 2013ರ ಅ.14ರಂದು ಜಗಳ ತೆಗೆದು ಮಂಜಮ್ಮ ಮೈಮೇಲೆ ತಿಪ್ಪೇಸ್ವಾಮಿ ಸೀಮೆ ಎಣ್ಣೆ ಸುರಿದರೆ, ನಾಗೇಂದ್ರಪ್ಪ ಬೆಂಕಿ ಹಚ್ಚಿದ್ದರು. ಅವರಿಗೆ ಅಪರಾಧ ಎಸಗಲು ಜಯಮ್ಮ ಪ್ರಚೋದನೆ ನೀಡಿದ್ದರು ಎಂಬ ಆರೋಪದ ಮೇಲೆ ಚಿತ್ರದುರ್ಗದ ಹಿರಿಯೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಆರೋಪಿಗಳನ್ನು ವರದಕ್ಷಿಣೆ ಕಿರುಕುಳ ನೀಡಿ ಸಾವಿಗೆ ಕಾರಣವಾದ ಆರೋಪದಿಂದ ಖುಲಾಸೆಗೊಳಿಸಿ ಅಧೀನ ನ್ಯಾಯಾಲಯವು 2018ರ ಜನವರಿಯಲ್ಲಿ ಆದೇಶಿಸಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಮೂವರು ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕಳೆದು ಹೋದ ಪಾಸ್‌ಪೋರ್ಟ್‌ ಮತ್ತೆ ಪಡೆಯಲು ಎಫ್‌ಐಆರ್‌ ಕಾಪಿ ಕಡ್ಡಾಯ: ಹೈಕೋರ್ಟ್‌

ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಸೆಕ್ಷನ್‌ 32ರ ಪ್ರಕಾರ ಮರಣಪೂರ್ವ ಹೇಳಿಕೆಯನ್ನೇ ಆರೋಪಿಗಳು ದೋಷಿಗಳೆಂದು ತೀರ್ಮಾನಿಸಲು ಏಕೈಕ ಆಧಾರ ಎನ್ನುವುದರಲ್ಲಿ ಯಾವುದೇ ತಕರಾರು ಇಲ್ಲ. ಆದರೆ, ಮೃತರು ಮರಣಪೂರ್ವ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಆಕೆಯ ಸಾವಿಗೆ ಆರೋಪಿಗಳೇ ಕಾರಣ ಎಂದು ಹೇಳಲಾಗದು. ಮರಣಪೂರ್ವ ಹೇಳಿಕೆಯು ವಿಶ್ವಾಸಾರ್ಹತೆ ಹಾಗೂ ನೈಜತೆಯಿಂದ ಕೂಡಿರಬೇಕು. ಜತೆಗೆ, ಸಂಶಯಾತೀತವಾಗಿರಬೇಕು. ಮರಣ ಹೇಳಿಕೆ ನೀಡುವಾಗ ಮೃತರು ಮಾನಸಿಕವಾಗಿ ಸದೃಢವಾಗಿರಬೇಕು ಎಂಬುದಾಗಿ ವೈದ್ಯರು ದೃಢೀಕರಣ ಪತ್ರ ನೀಡುವುದು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ, ಮದುವೆಯಾದ ಏಳು ವರ್ಷದೊಳಗೆ ಮಂಜಮ್ಮನ ಸಾವು ಸಂಭವಿಸಿದ್ದರೂ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ವರದಕ್ಷಿಣೆ ಕಿರುಕುಳದಿಂದ ಖುಲಾಸೆಗೊಳಿಸಿದೆ. ಇದು ಸಹಜವಾಗಿ ಕೊಲೆ ಪ್ರಕರಣದ ಸಾಕ್ಷ್ಯವನ್ನು ದುರ್ಬಲಗೊಳಿಸಲಿದೆ. ಇನ್ನೂ ಮಂಜಮ್ಮಳ ಮರಣಪೂರ್ವ ಹೇಳಿಕೆಯನ್ನು ಸೂಕ್ತ ರೀತಿಯಲ್ಲಿ ದಾಖಲಿಸಿಲ್ಲ. ಎರಡೆರಡು ಬಾರಿ ಮರಣಪೂರ್ವಹೇಳಿಕೆ ದಾಖಲಿಸಲಾಗಿದೆ. ಎರಡರಲ್ಲಿನ ಹೇಳಿಕೆಗಳು ಸಹ ವಿಭಿನ್ನವಾಗಿವೆ ಎಂದು ನ್ಯಾಯಪೀಠ ಹೇಳಿದೆ. ಮೇಲ್ಮನವಿದಾರರ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಿದ್ದರು.