ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅತ್ಯಾಚಾರಿಯನ್ನೇ ಮದುವೆಯಾಗುವ ಸಂತ್ರಸ್ತೆಯ ನಿರ್ಧಾರವನ್ನು ಹೈಕೋರ್ಟ್‌ ಒಪ್ಪಿ, ಶಿಕ್ಷೆಯನ್ನು ಅಮಾನತುಗೊಳಿಸುವ ಅಪರೂಪದ ಆದೇಶವನ್ನು ಹೈಕೋರ್ಟ್‌ ನೀಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮೇ.03): ನೆರೆಹೊರೆಯವರ ಮುಂದೆ ಘನತೆಯಿಂದ ಜೀವನ ಸಾಗಿಸಲು ಹಾಗೂ ಬದುಕಿನಲ್ಲಿ ಶಾಂತಿ-ನೆಮ್ಮದಿ ಕಾಣಲು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅತ್ಯಾಚಾರಿಯನ್ನೇ ಮದುವೆಯಾಗುವ ಸಂತ್ರಸ್ತೆಯ ನಿರ್ಧಾರವನ್ನು ಹೈಕೋರ್ಟ್‌ ಒಪ್ಪಿ, ಶಿಕ್ಷೆಯನ್ನು ಅಮಾನತುಗೊಳಿಸುವ ಅಪರೂಪದ ಆದೇಶವನ್ನು ಹೈಕೋರ್ಟ್‌ ನೀಡಿದೆ.

ಒಂದೇ ಗ್ರಾಮದ ನಿವಾಸಿ ಹಾಗೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾದ ಆರೋಪಿ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅಪ್ರಾಪ್ತೆಯಾದ ಪ್ರಿಯತಮೆಯನ್ನೇ ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಪ್ರಿಯತಮಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಸಂತ್ರಸ್ತೆ, ಗ್ರಾಮದಲ್ಲಿ ನೆರೆಹೊರೆಯವರ ಮುಂದೆ ಘನತೆಯಿಂದ ಜೀವನ ಸಾಗಿಸಬೇಕೆಂದರೆ ಅತ್ಯಾಚಾರ ಎಸಗಿದ ಪ್ರಿಯತಮನನ್ನೇ ಮದುವೆಯಾಗುವುದು ಏಕೈಕ ಮಾರ್ಗ. ಸದ್ಯ ಮದುವೆಯಾಗಲು ನಾವಿಬ್ಬರೂ ಒಪ್ಪಿದ್ದು, ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಪ್ರಿಯತಮನಿಗೆ ಜಾಮೀನು ನೀಡಬೇಕು ಎಂದು ಕೋರಿದರು.

ರಾಹುಲ್ ಗಾಂಧಿ ಶಾಕ್ ನೀಡಿದ ಹೈಕೋರ್ಟ್,ಸರ್ನೇಮ್ ಕೇಸಲ್ಲಿ ಮಧ್ಯಂತರ ತಡೆಗೆ ನಕಾರ!

ಈ ಪ್ರಮಾಣಪತ್ರ ಪರಿಗಣಿಸಿದ ಹೈಕೋರ್ಟ್‌, ಮದುವೆಗೆ ಅವಕಾಶ ನೀಡದೆ ಹೋದರೆ ಸಂತ್ರಸ್ತೆಯ ಘನತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟು ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಿದೆ. ಜೊತೆಗೆ ಆರೋಪಿ, ಮತ್ತವರ ಪೋಷಕರು ಯಾವುದೇ ಕಾರಣಕ್ಕೂ ಸಂತ್ರಸ್ತೆಗೆ ನೋವುಂಟು ಮಾಡಬಾರದು. ಆಕೆಯನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಒಂದೊಮ್ಮೆ ಉತ್ತಮವಾಗಿ ನೋಡಿಕೊಳ್ಳದಿದ್ದರೆ, ರಾಜ್ಯ ಸರ್ಕಾರ ಅಥವಾ ಸಂತ್ರಸ್ತೆ ಆರೋಪಿಯ ಜಾಮೀನು ರದ್ದತಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಷರತ್ತು ವಿಧಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಭವಿಷ್ಯದ ಪ್ರಕರಣಗಳಿಗೆ ನಿದರ್ಶನವಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿ ಅಪರೂಪದ ಆದೇಶ ಹೊರಡಿಸಿದೆ.

ಪ್ರಕರಣದ ವಿವರ:

ಅಪ್ರಾಪ್ತೆಯಾಗಿದ್ದ ಸಂತ್ರಸ್ತೆಯನ್ನು (ಆಕೆಗೆ 17 ವರ್ಷವಿದ್ದಾಗ) ಅಪಹರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಆರೋಪಿ ವಿರುದ್ಧ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಸೆಷನ್ಸ್‌ ನ್ಯಾಯಾಲಯ ಆರೋಪಿಗೆ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಆರೋಪಿ 2019ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ನಾಲ್ಕು ವರ್ಷದಿಂದ ಆರೋಪಿ ಜೈಲಿನಲ್ಲಿದ್ದಾನೆ.

ಮಗುವನ್ನು ಬಿಟ್ಟುಹೋದ ತಂದೆ ಹೆಸರನ್ನು ಪಾಸ್‌ಪೋರ್ಟ್‌ನಿಂದ ತೆಗೆಯಲು ಹೈಕೋರ್ಟ್ ಸೂಚನೆ!

2023ರ ಮಾ.15ರಂದು ಆರೋಪಿ ಪರ ವಕೀಲ ಸಿ.ಎನ್‌. ರಾಜು ಹಾಜರಾಗಿ, ‘ಮದುವೆಯಾಗಲು ಸಂತ್ರಸ್ತೆ ಮತ್ತು ಆರೋಪಿ ಒಪ್ಪಿದ್ದಾರೆ. ಈ ಕುರಿತು ಸಂತ್ರಸ್ತೆಯೇ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಜೀವಾವಧಿ ಶಿಕ್ಷೆಯನ್ನು ಮಾನತ್ತಿನಲ್ಲಿಸಿ ಆರೋಪಿಗೆ ಜಾಮೀನು ನೀಡಬೇಕು’ ಎಂದು ಕೋರಿದ್ದರು. ನಂತರ ಕೋರ್ಟ್‌ ಸೂಚನೆ ಮೇರೆಗೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಸಂತ್ರಸ್ತೆ, ಆರೋಪಿ ಮತ್ತು ಆತನ ತಂದೆ-ತಾಯಿ ಮದುವೆಗೆ ಸಮ್ಮತಿಸಿದ್ದರು. ಆರೋಪಿ ತಂದೆ, ಸಂತ್ರಸ್ತೆ ಹೆಸರಿನಲ್ಲಿ ಒಂದು ಎಕರೆ ಜಮೀನನ್ನು ನೋಂದಣಿ ಮಾಡಿಕೊಡಲಾಗುವುದು ಎಂದು ಸಹ ಕೋರ್ಟ್‌ಗೆ ಭರವಸೆ ನೀಡಿದರು. ಆದರೆ ಸಂತ್ರಸ್ತೆಯ ತಂದೆ-ತಾಯಿ ಮದುವೆಗೆ ನಿರಾಕರಿಸಿದ್ದರು. ಸಂತ್ರಸ್ತೆಯ ಹೇಳಿಕೆ ಪರಿಗಣಿಸಿ ಈ ಆದೇಶ ಮಾಡಿದೆ.

ಸಂತ್ರಸ್ತೆಯ ಪ್ರಮಾಣ ಪತ್ರವೇನು

‘ನನಗೆ ಸದ್ಯ 24 ವರ್ಷ. ಘಟನೆ ನಡೆದಾಗ ಆರೋಪಿ ಮತ್ತು ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೆವು. ಪರಸ್ಪರ ಪ್ರೀತಿಸುತ್ತಿದ್ದೆವು. ಪೋಷಕರ ಭಯ ಮತ್ತು ಒತ್ತಾಯದಿಂದ ಆರೋಪಿ ವಿರುದ್ಧ ಸಾಕ್ಷ್ಯ ನುಡಿದಿದ್ದೆ. ಸದ್ಯ ಆರೋಪಿಯನ್ನು ಮದುವೆಯಾಗಲು ನಾನು ಸಿದ್ಧನಿದ್ದೇನೆ. ಮದುವೆಗೆ ಆತನೂ ಒಪ್ಪಿದ್ದಾನೆ. ನನ್ನ ತಂದೆಗೆ ಮೂವರು ಹೆಣ್ಣು ಮಕ್ಕಳು. ನಾನೇ ಹಿರಿಯವಳು. ಕಿಡ್ನಿ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ತಂದೆ ಬಳಲುತ್ತಿದ್ದು, ವಾರಕ್ಕೆ ಎರಡು ದಿನ ಡಯಾಲಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ನಾನು ಮತ್ತು ಆರೋಪಿ ಚಿಕ್ಕಂದಿನಿಂದಲೂ ಒಂದೇ ಗ್ರಾಮದಲ್ಲಿ ವಾಸವಾಗಿದ್ದೇವೆ. ಆದ ಕಾರಣ ಆತನನ್ನು ಮದುವೆಯಾಗದಿದ್ದಲ್ಲಿ ಗ್ರಾಮದಲ್ಲಿ ಘನತೆ ಮತ್ತು ಗೌರವದಿಂದ ಬದುಕು ಮುನ್ನಡೆಸಲು ನನಗೆ ಕಷ್ಟವಾಗಲಿದೆ. ಆದ್ದರಿಂದ ಮದುವೆಯಾಗುವುದಕ್ಕಾಗಿ ಆರೋಪಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಜಾಮೀನು ನೀಡಬೇಕು’ ಎಂದು ಸಂತ್ರಸ್ತೆ ಪ್ರಮಾಣ ಪತ್ರದಲ್ಲಿ ಕೋರಿದ್ದರು.