ಪೋಸ್ಟರ್‌ ಅಂಟಿಸಲು ಕರೆ ಕೊಟ್ಟರೆ ಅಪರಾಧವಲ್ಲ, ಇಬ್ಬರ ವಿರುದ್ಧದ ಕೇಸ್‌ ಹೈಕೋರ್ಟ್‌ನಿಂದ ರದ್ದು

ಬೆಂಗಳೂರು(ಅ.22): ‘ಪೇಸಿಎಂ’ ಅಭಿಯಾನಕ್ಕೆ ಕರೆ ಕೊಟ್ಟ ಆರೋಪದಲ್ಲಿ ಬೆಂಗಳೂರು ಸನಿಹದ ನೆಲಮಂಗಲದ ವಕೀಲರೂ ಆದ ಇಬ್ಬರು ಕಾಂಗ್ರೆಸ್ಸಿಗರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ನೆಲಮಂಗಲ ವಿಧಾನಸಭೆ ಕ್ಷೇತ್ರದ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರೂ ಆದ ವಕೀಲ ಜೆ.ಎಸ್‌. ನಾರಾಯಣ ಗೌಡ ಹಾಗೂ ಕಾನೂನು ಘಟಕದ ಮುಖ್ಯಸ್ಥರೂ ಆಗಿರುವ ವಕೀಲ ವಿ. ರಾಮಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ‘ಪೇಸಿಎಂ ಪೋಸ್ಟರ್‌ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಮೊಬೈಲ್‌ ಮೂಲಕ ಇತರರಿಗೆ ಸೂಚಿಸಿದ್ದಾರೆ ಎಂಬ ಆರೋಪ ಅರ್ಜಿದಾರರ ಮೇಲಿದೆ. ಪೋಸ್ಟರ್‌ ಅಂಟಿಸಲು ಕರೆ ನೀಡಿದರು ಎಂದ ಮಾತ್ರಕ್ಕೆ ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯ್ದೆ ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯ್ದೆಯ ನಿಯಮಗಳ ಪ್ರಕಾರ ಅರ್ಜಿದಾರರು ಅಪರಾಧಿಗಳಾಗುವುದಿಲ್ಲ. ಆ ಕಾಯ್ದೆಗಳಡಿ ಅಪರಾಧವಾಗುವಂತಹ ಯಾವುದೇ ಕೃತ್ಯವನ್ನು ಅರ್ಜಿದಾರರು ಎಸಗಿಲ್ಲ’ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್‌ ರದ್ದುಪಡಿಸಿತು.

ಪೇಸಿಎಂ ಟೀ ಶರ್ಟ್‌ ಧರಿಸಿದ್ದ ಯುವಕ ವಶಕ್ಕೆ, ಬಂಧನಕ್ಕೂ ಮುನ್ನ ಪೊಲೀಸರು ಹೊಡೆದ ವಿಡಿಯೋ ವೈರಲ್

‘ಅರ್ಜಿದಾರರ ಸೂಚನೆ ಮೇರೆಗೆ ಎಲ್‌.ಎನ್‌. ವರುಣ್‌ ಕುಮಾರ್‌, ಕೃಷ್ಣ ಪವಾರ್‌ ಮತ್ತು ಸಿ.ಅಶೋಕ್‌ ಕುಮಾರ್‌ ಎಂಬುವರು ನೆಲಮಂಗಲದ ವಿವಿಧೆಡೆ ಮುಖ್ಯಮಂತ್ರಿಗಳ ಭಾವ ಚಿತ್ರವಿರುವ ಕ್ಯೂಆರ್‌ ಕೋಡ್‌ ಹೊಂದಿದ್ದ ಭಿತ್ತಿಪತ್ರ ಅಂಟಿಸುತ್ತಿದ್ದರು. ಇಂತಹ ಪೋಸ್ಟರ್‌ ಅಂಟಿಸುವ ಮೂಲಕ ಸಾರ್ವಜನಿಕ ಸ್ಥಳಗಳ ಅಂದಗೆಡಿಸುತ್ತಿದ್ದಾರೆ’ ಎಂದು ಆರೋಪಿಸಿ ನೆಲಮಂಗಲ ಟೌನ್‌ ಠಾಣಾ ಪೊಲೀಸರು ಅರ್ಜಿದಾರರೂ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.