ಭಾರತ್‌ ಐಕ್ಯತಾ ಯಾತ್ರೆಯ ಸಮಯದಲ್ಲಿ ಪೇಸಿಎಂ ಎಂದು ಟೀ ಶರ್ಟ್‌ ಧರಿಸಿ 40% ಸರ್ಕಾರ ಎಂದು ಭಾವುಟ ಹಾರಿಸಿದ ಯುವಕನನ್ನು ಟೀ ಶರ್ಟ್‌ ಬಿಚ್ಚಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸುವ ಮುನ್ನವೇ ಪೊಲೀಸರು ಯುವಕನಿಗೆ ಹೊಡೆದಿದ್ದು, ವೈರಲ್ ವಿಡಿಯೋ ನೋಡಿ ಜನ ಖಂಡನೆ ವ್ಯಕ್ತಪಡಿಸಿದ್ದಾರೆ.

 ಗುಂಡ್ಲುಪೇಟೆ (ಅ.2): ಭಾರತ್‌ ಐಕ್ಯತಾ ಯಾತ್ರೆಯ ಸಮಯದಲ್ಲಿ ಪೇಸಿಎಂ ಎಂದು ಟೀ ಶರ್ಟ್‌ ಧರಿಸಿ 40% ಸರ್ಕಾರ ಎಂದು ಭಾವುಟ ಹಾರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಅಕ್ಷಯ್‌ಕುಮಾರ್‌ ಭಾರತ್‌ ಐಕ್ಯತಾ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್‌ ಧರಿಸಿ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾನೆ ಎಂದು ಗುಂಡ್ಲುಪೇಟೆಯ ಕಿರಣ್‌ ಚಾಮರಾಜನಗರ ಸೆನ್‌ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೂಡ ದಾಖಲಾಗಿತ್ತು. ಶನಿವಾರ ಗುಂಡ್ಲುಪೇಟೆ ಗಡಿ ದಾಟಿದ ಬಳಿಕ ನಂಜನಗೂಡು ಸರಹದ್ದಿನಲ್ಲಿ ಯಾತ್ರೆಯಲ್ಲಿದ್ದಾಗ ಗುಂಡ್ಲುಪೇಟೆ ಪೊಲೀಸರು ಯುವಕನನ್ನು ಬಂಧಿಸಿ ಟೀ ಶರ್ಟ್‌ ಸ್ಥಳದಲ್ಲೇ ಬಿಚ್ಚಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೇಸಿಎಂ ಟೀ ಶರ್ಟ್‌ ಧರಿಸಿದ್ದ ಆರೋಪಿ ಅಕ್ಷಯ್‌ಕುಮಾರ್‌ ಟೀ ಶರ್ಟ್‌ ಬಿಚ್ಚುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಟೀ ಶರ್ಟ್‌ ಬಿಚ್ಚುವ ಮುನ್ನವೇ ಪೊಲೀಸ್‌ ಅಧಿಕಾರಿಯೊಬ್ಬರು ಆರೋಪಿಗೆ ಹಿಂಬದಿಯಿಂದ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಸಾರ್ವಜನಿಕರು ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಡೆಸಿದ ಪೇಸಿಎಂ ಅಭಿಯಾನ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯಲ್ಲಿದೆ. ಮಾತ್ರವಲ್ಲ ಆಡಳಿತ ಪಕ್ಷ ಬಿಜೆಪಿಯ ಕೆಂಗಣ್ಣಿಗೂ ಗುರಿಯಾಗಿದೆ.

ಕಾಂಗ್ರೆಸ್‌ ಮೇಲೆ ಪೊಲೀಸ್‌ ಗೂಂಡಾಗಿರಿ: ಸಿದ್ದು ಗರಂ
‘ಭಾರತ ಐಕ್ಯತಾ ಯಾತ್ರೆಯಲ್ಲಿ ‘ಪೇ-ಸಿಎಂ’ ಟೀ ಶರ್ಟ್‌ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಬೀದಿ ಗೂಂಡಾ ರೀತಿ ಹಲ್ಲೆಗೈದ ಪೊಲೀಸ್‌ ಅಧಿಕಾರಿಯ ಕೃತ್ಯ ಖಂಡನೀಯ. ಕೂಡಲೇ ಪುಂಡ ಪೊಲೀಸನನ್ನು ಅಮಾನತು ಮಾಡಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಕೆಲ ದಿನಗಳಿಂದ ರಾಜ್ಯದ ಪೊಲೀಸರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಶುರುಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಜನರೇ ಪೊಲೀಸರ ವಿರುದ್ಧ ತಿರುಗಿ ಬೀಳುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಬೇಡಿ’ ಎಂದು ಇದೇ ವೇಳೆ ರಾಜ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಯಥಾ ಮುಖ್ಯಮಂತ್ರಿ, ತಥಾ ಪೊಲೀಸ್‌. ಉತ್ತರ ಪ್ರದೇಶ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದನ್ನು ಪೊಲೀಸರು ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡುವ ಮೂಲಕ ಅನುಷ್ಠಾನಕ್ಕೆ ತರಲು ಹೊರಟಂತಿದೆ’ ಎಂದು ಕಿಡಿಕಾರಿದರು.

Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್‌ ಗಾಂಧಿ

ಭ್ರಷ್ಟಾಚಾರದ ವಿರುದ್ಧದ ಅಭಿಯಾನ ಅಪರಾಧ ಎಂದು ಯಾವ ಕಾನೂನಿನಲ್ಲಿದೆ? 40 ಪರ್ಸೆಂಟ್‌ ಭ್ರಷ್ಟಾಚಾರದ ವಿರುದ್ಧ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ದಮ್ಮು-ತಾಕತ್ತು ಬಿಜೆಪಿಗೆ ಇಲ್ಲ. ಹೀಗಾಗಿ ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದ ಬಿಜೆಪಿಯವರು ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದ್ದಾರೆ. ಕರ್ನಾಟಕ ಶಾಂತಿ ಪ್ರಿಯರ ನಾಡು. ಇದನ್ನು ಪೊಲೀಸ್‌ ರಾಜ್ಯ ಮಾಡಲು ಹೋಗಬೇಡಿ. ಯಾವ ಸರ್ಕಾರವೂ ಶಾಶ್ವತವಲ್ಲ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪೇ ಸಿಎಂ ಅಭಿಯಾನದ ವಿರುದ್ದ ಹಾವೇರಿ ಮಠಾಧೀಶರ ಆಕ್ರೋಶ

ರಾಜಕೀಯವಾಗಿಯೇ ಎದುರಿಸುತ್ತೇವೆ: 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಮ್ಮ ವಿರುದ್ಧಕೊಳಕು ಭಾಷೆಯ ಜಾಹೀರಾತು ನೀಡಿದ್ದೀರಿ. ಅದನ್ನು ನಾವು ಹರಿದುಹಾಕಲು ಹೋಗುವುದಿಲ್ಲ. ರಾಜಕೀಯವಾಗಿಯೇ ಎದುರಿಸುತ್ತೇವೆ.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ