ಬೆಂಗಳೂರು(ಆ.12): ರಾಜ್ಯದಲ್ಲಿ ಕೋವಿಡ್‌-19 ತಡೆಗಟ್ಟುವ ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಮತ್ತಿತರರಿಗೆ ವಿಮೆ ಮೊತ್ತವನ್ನು 50 ಲಕ್ಷ ರುಗಳಿಗೆ ಹೆಚ್ಚಿಸುವ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. 

ಕೋವಿಡ್‌-19 ನಿರ್ವಹಣೆ, ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ವೈದ್ಯಕೀಯ ವಿಮಾ ವ್ಯಾಪ್ತಿಗೆ ಒಳಪಡದ ರಾಜ್ಯದಲ್ಲಿ ಕೋವಿಡ್‌-19 ತಡೆಗಟ್ಟುವ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಮತ್ತು ಕೊರೋನಾ ಸೋಂಕಿನಿಂದ ಮೃತಪಟ್ಟರೆ ಅಥವಾ ಕೋವಿಡ್‌-19 ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡರೆ ಅಂತಹವರಿಗೆ ನಿಗದಿಪಡಿಸಲಾದ ವಿಮೆ ಮೊತ್ತವನ್ನು 30 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಗುಡಿಸಲು ಕಳೆದುಕೊಂಡವರಿಗೆ 6,100 ಪರಿಹಾರ ಸಾಕೇ?ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ

ಅಲ್ಲದೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, ಗೃಹ ರಕ್ಷಣಾ ದಳ, ಪೌರ ರಕ್ಷಣಾ ದಳ, ಅಗ್ನಿಶಾಮಕ ದಳದ ನೌಕರರು, ಅಧಿಕಾರಿಗಳು, ಬಂಧಿಖಾನೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಯಾನಿಟೈಸರ್‌ ಕೆಲಸಗಾರರು, ಅದಕ್ಕೆ ಸಂಬಂಧಿಸಿದ ವಾಹನಗಳ ಚಾಲಕರು ಹಾಗೂ ಲೋಡರ್‌ಗಳು ಈ ವಿಮೆ ವ್ಯಾಪ್ತಿಯೊಳಗೆ ಬರಲಿದ್ದಾರೆ ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಆದಷ್ಟುಬೇಗ ಈ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಕೋರ್ಟ್‌ ಆಕ್ಷೇಪ:

ಕೋವಿಡ್‌ ಆರೋಗ್ಯ ಕೇಂದ್ರ, ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್‌ ನೌಕರರಿಗೆ ಮಾತ್ರ ತಲಾ 10 ಸಾವಿರ ರು. ಪಿಪಿಇ ಕೋವಿಡ್‌ ರಿಸ್ಕ್‌ ಭತ್ಯೆ ನೀಡಲಾಗುತ್ತಿದೆ ಎಂದು ಇದೇ ವೇಳೆ ಸರ್ಕಾರದ ಪರ ವಕೀಲರು ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ಕಂಟೈನ್ಮೆಂಟ್‌ ವಲಯಗಳಲ್ಲಿ ಜೈವಿಕ ತ್ಯಾಜ್ಯ ಸೇರಿದಂತೆ ದೈನಂದಿನ ತ್ಯಾಜ್ಯ ಸಂಗ್ರಹಿಸುವ ಪೌರ ಕಾರ್ಮಿಕರು ಸಹ ಅಪಾಯದಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಸ್ಕ್‌ ಭತ್ಯೆ ವಿಚಾರದಲ್ಲಿ ಪೌರಕಾರ್ಮಿಕರಿಗೆ ತಾರತಮ್ಯ ಮಾಡುವುದು ಸರಿಯಲ್ಲ. ಅವರಿಗೆ ರಿಸ್ಕ್‌ ಭತ್ಯೆ ನೀಡುವ ಬಗ್ಗೆ ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.