ಬೆಂಗಳೂರು(ಆ.12): ನಗರದ ಕಾಚರಕನಹಳ್ಳಿಯ ಕೊಳಗೇರಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲಾ 6,100 ರು. ಪರಿಹಾರ ಘೋಷಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಸೂಚಿಸಿದೆ.

ಪ್ರಕರಣ ಕುರಿತು ವಕೀಲರಾದ ವೈಶಾಲಿ ಹೆಗಡೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸಂತ್ರಸ್ತ ಕುಟುಂಬಕ್ಕೆ ಕೇವಲ 6,100 ರು. ಪರಿಹಾರ ಸಾಕೇ, ಇಡೀ ಮನೆಯನ್ನೇ ಕಳೆದುಕೊಂಡಿರುವಾಗ ಈ ಹಣ ಯಾವುದಕ್ಕೆ ಸರಿ ಹೊಂದುತ್ತದೆ, ಆ ಮೊತ್ತದಲ್ಲಿ ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

ತವರಿನಿಂದ ಬಂದವರಿಗೆ ಶಾಕ್‌: ಕೂಲಿ ಕಾರ್ಮಿಕರ 30 ಗುಡಿಸಲಿಗೆ ಬೆಂಕಿ!

ಸರ್ಕಾರಿ ವಕೀಲರು ಉತ್ತರಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯ ವಿಪತ್ತು ನಿಧಿಯಿಂದ ಈ ಪರಿಹಾರ ಕೊಡಲಾಗುತ್ತಿದೆ. ಮನೆ ಹಾನಿಗೆ 4,100 ರು. ಮತ್ತು ಗೃಹ ಬಳಕೆ ವಸ್ತು ನಾಶಕ್ಕೆ 2,000 ರು. ಪರಿಹಾರ ನೀಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಅದನ್ನು ಒಪ್ಪದ ನ್ಯಾಯಪೀಠ, ಪ್ರಕರಣವು ವಿಪತ್ತು ಅಲ್ಲ. ಕಿಡಿಗೇಡಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಅಮಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರಕರಣವನ್ನು ವಿಪತ್ತು ಕಾಯ್ದೆಯಡಿ ಪರಿಗಣಿಸಿ ಪರಿಹಾರ ನೀಡಲು ಆಗುವುದಿಲ್ಲ. ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ನುಡಿಯಿತು.

ಅಲ್ಲದೆ, ಈಗ 6100 ಪರಿಹಾರ ಘೋಷಿಸಿ ಕೈಗೊಂಡ ನಿರ್ಧಾರವನ್ನು ಸರ್ಕಾರ ಎರಡು ವಾರದಲ್ಲಿ ಮರು ಪರಿಶೀಲನೆ ನಡೆಸಿ ಪ್ರಮಾಣಪತ್ರ ಸಲ್ಲಿಸಬೇಕು. ಹಾಗೆಯೇ, ಈಗಾಗಲೇ ನಿರ್ಧರಿಸಿರುವಂತೆ ಪರಿಹಾರ ಮೊತ್ತವನ್ನು ಸಂತ್ರಸ್ತರಿಗೆ ವಿತರಿಸುವ ಕಾರ್ಯ ಆರಂಭಿಸಬೇಕು. ಎಷ್ಟುಜನರಿಗೆ ಪರಿಹಾರ ವಿತರಿಸಲಾಯಿತು ಮತ್ತು ಮರು ಪರಿಶೀಲನೆ ಮಾಡಿದ ನಂತರ ಎಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲುಗೋಳ ವಾದ ಮಂಡಿಸಿ, ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ತಲಾ 6,100 ರು. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು.