Asianet Suvarna News Asianet Suvarna News

ಆಫ್‌ಲೈನ್‌ ಪರೀಕ್ಷೆ ಕುರಿತು ಸ್ಪಷ್ಟನೆ ನೀಡಿ: ಕೃಷಿ ವಿವಿಗೆ ಹೈಕೋರ್ಟ್‌ ಸೂಚನೆ

ಕೃಷಿ ವಿವಿಯ ವಿವಿಧ ಕೋರ್ಸ್‌ಗಳಿಗೆ ಆ.21ರಿಂದ ಆನ್‌ಲೈನ್‌ ಪರೀಕ್ಷೆ ನಡೆಯಬೇಕಿತ್ತು| ಪರೀಕ್ಷಾ ದಿನಾಂಕವನ್ನು ಸೆ.4ಕ್ಕೆ ಮುಂದೂಡಿದ್ದ ವಿವಿ| ಆನ್‌ಲೈನ್‌ ಪರೀಕ್ಷೆಗಳ ಬದಲಿಗೆ ಆಫ್‌ಲೈನ್‌ ಪರೀಕ್ಷೆಗಳನ್ನೇ ನಡೆಸಬಹುದು| 

High Court Notice to Agricultural University for Offline Exam
Author
Bengaluru, First Published Aug 30, 2020, 7:56 AM IST

ಬೆಂಗಳೂರು(ಆ.30): ತನ್ನ ವ್ಯಾಪ್ತಿಯ ಕೃಷಿ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳಿಗೆ ‘ಆನ್‌ಲೈನ್‌ ಪರೀಕ್ಷೆ’ಗಳ ಬದಲಿಗೆ ‘ಆಫ್‌ಲೈನ್‌ ಪರೀಕ್ಷೆ’ ನಡೆಸುವ ಕುರಿತು ವಿವರವಾಗಿ ಸ್ಪಷ್ಟಪಡಿಸುವಂತೆ ಬೆಂಗಳೂರು ಕೃಷಿ ವಿವಿಗೆ ಹೈಕೋರ್ಟ್‌ ಸೂಚಿಸಿದೆ.

ಕೃಷಿ ವಿಶ್ವವಿದ್ಯಾಲಯದ ಬಿಎಸ್‌ಸಿ (ಕೃಷಿ) ಕೋರ್ಸ್‌ನ ಸದಾನಂದ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ, ಕೃಷಿ ವಿವಿಯ ವಿವಿಧ ಕೋರ್ಸ್‌ಗಳಿಗೆ ಆ.21ರಿಂದ ಆನ್‌ಲೈನ್‌ ಪರೀಕ್ಷೆ ನಡೆಯಬೇಕಿತ್ತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಮಧ್ಯೆ ವಿವಿ ಪರೀಕ್ಷಾ ದಿನಾಂಕವನ್ನು ಸೆ.4ಕ್ಕೆ ಮುಂದೂಡಿದೆ. ಆದರೆ, ಅಕ್ಟೋಬರ್‌ನಿಂದ ಎಂದಿನಂತೆ ತರಗತಿಗಳು ಆರಂಭಗೊಳ್ಳಲಿವೆ ಎಂದು ಸರ್ಕಾರವೇ ಹೇಳುತ್ತಿದ್ದು, ಆನ್‌ಲೈನ್‌ ಪರೀಕ್ಷೆಗಳ ಬದಲಿಗೆ ಆಫ್‌ಲೈನ್‌ ಪರೀಕ್ಷೆಗಳನ್ನೇ ನಡೆಸಬಹುದು. ಈ ನಿಟ್ಟಿನಲ್ಲಿ ವಿವಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಬೆಂಗಳೂರು ಗಲಭೆ: ಕ್ಲೇಮ್‌ ಕಮಿಷನರ್‌ ನೇಮಕಕ್ಕೆ ಹೈಕೋರ್ಟ್‌ಗೆ ಸರ್ಕಾರದ ಅರ್ಜಿ

ಆನ್‌ಲೈನ್‌ ಪರೀಕ್ಷೆಗಳ ಬದಲಿಗೆ ಮೊದಲಿನ ವ್ಯವಸ್ಥೆಯಂತೆ ಆಫ್‌ಲೈನ್‌ ಪರೀಕ್ಷೆಗಳನ್ನು ನಡೆಸಬೇಕೆಂಬ ಅರ್ಜಿದಾರರ ಮನವಿ ಕುರಿತು ನಿಲುವು ತಿಳಿಸಿ ಆಕ್ಷೇಪಣೆ ಸಲ್ಲಿಸುವಂತೆ ವಿವಿಗೆ ಸೂಚಿಸಿದ ಪೀಠ, ಅರ್ಜಿಯನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವ ಅಗತ್ಯವಿರುವುದರಿಂದ ಶಿಕ್ಷಣದ ವಿಚಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತು.
 

Follow Us:
Download App:
  • android
  • ios