ಬೆಂಗಳೂರು(ಆ.20): ಆಗಸ್ಟ್‌ 11ರಂದು ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉಂಟಾಗಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಕ್ಲೇಮ್‌ ಕಮಿಷನರ್‌ ನೇಮಕ ಮಾಡಲು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸರ್ಕಾರದ ಪರ ತ್ವರಿತ ಅರ್ಜಿ ಸಲ್ಲಿಸಿ ಕ್ಲೇಮ್‌ ಕಮಿಷನರ್‌ ನೇಮಕ ಮಾಡುವಂತೆ ಮನವಿ ಮಾಡಿದರು.

ಬೆಂಗಳೂರು ಗಲಭೆ: ಮಾಜಿ ಮೇಯರ್‌ ಸಂಪತ್‌, ಜಾಕೀರ್‌ಗೆ ಮುಳ್ಳಾದ ಎಸ್‌ಡಿಪಿಐ ಸ್ನೇಹ?

ವಿಚಾರಣೆ ನಡೆಸಿದ ನ್ಯಾಯಪೀಠ, ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ಕರೆ ನೀಡಿದ್ದ ಬಂದ್‌ ವೇಳೆ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ನಡೆಸಲಾದ ಬಂದ್‌ ಸಂದರ್ಭದಲ್ಲಿ ಉಂಟಾದ ನಷ್ಟದ ಅಂದಾಜಿಗೆ ಕ್ಲೇಮ್‌ ಕಮಿಷನರ್‌ ನೇಮಕ ಮಾಡಿದ್ದ ಆದೇಶವನ್ನು ಹಾಜರುಪಡಿಸಲು ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ (ಆ.20) ಮುಂದೂಡಿತು.

ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯಲ್ಲಿ 80 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಎರಡು ಪೊಲೀಸ್‌ ಠಾಣೆಗಳಿಗೆ ಹಾನಿ ಮಾಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡಲಾಗಿದೆ. ಪೊಲೀಸ್‌ ವಾಹನಗಳು ಸೇರಿದಂತೆ ನೂರಾರು ವಾಹನಗಳನ್ನು ಸುಟ್ಟು ಹಾಕಲಾಗಿದೆ. ಈ ಸಂಬಂಧ ಈವರೆಗೆ 65ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ನಷ್ಟದ ಅಂದಾಜು ಮಾಡಿ, ಹೊಣೆಗಾರಿಕೆ ನಿಗದಿಪಡಿಸಿ, ನಷ್ಟ ಅನುಭವಿಸಿದವರಿಗೆ ಪರಿಹಾರ ದೊರಕಿಸಲು ಕ್ಲೇಮ್‌ ಕಮಿಷನರ್‌ ನೇಮಕ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.