ಬೆಂಗಳೂರು(ಸೆ.05): ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿಯಾದ ಬ್ಯಾಂಕಿನ ಅಧ್ಯಕ್ಷ ಕೆ.ರಾಮಕೃಷ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು  ತನಿಖಾಧಿಕಾರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಹಗರಣದ ಕುರಿತು ಬಸವನಗುಡಿ ನಿವಾಸಿ ಕೆ.ಆರ್‌. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಬ್ಯಾಂಕಿನ ಅಧ್ಯಕ್ಷ ಕೆ.ರಾಮಕೃಷ್ಣ ಅವರನ್ನು ಇದುವರೆಗೂ ಬಂಧನ ಮಾಡಿಲ್ಲ. ಹೀಗಾಗಿ, ಕೂಡಲೇ ರಾಮಕೃಷ್ಣ ಮತ್ತು ಅವರ ಪುತ್ರನ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರ ಬಂಧನಕ್ಕೆ ವಾರೆಂಟ್‌ ಹೊರಡಿಸಲು ಕೋರಿ ತನಿಖಾಧಿಕಾರಿ ಸಲ್ಲಿಸಿರುವ ಮನವಿಯನ್ನು ಮೊದಲನೇ ಎಸಿಎಂಎಂ ನ್ಯಾಯಾಲಯ ತ್ವರಿತವಾಗಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಆಡಳಿತಾಧಿಕಾರಿ ಬ್ಯಾಂಕಿನ ಕೆಲಸಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕಿದೆ. ಅದಕ್ಕಾಗಿ ಅವರನ್ನು ಸರ್ಕಾರದ ಇತರೆ ಇಲಾಖೆಯ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಎರಡು ವಾರದಲ್ಲಿ ಕ್ರಮಕೈಗೊಂಡು ಪ್ರಮಾಣಪತ್ರ ಸಲ್ಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿತು.

ಗುರು ರಾಘವೇಂದ್ರ ಬ್ಯಾಂಕ್‌ ಹಗರಣ: ಆರೋಪಿ ಬಂಧಿಸದ್ದಕ್ಕೆ ಹೈಕೋರ್ಟ್‌ ಗರಂ

ಸಾಲ ಮರುಪಾವತಿ ಮಾಡಲು ಇಚ್ಛೆ ಹೊಂದಿರುವವರನ್ನು ಸಂಪರ್ಕಿಸಿ, ಯಾವ ವಿಧಾನದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಆಡಳಿತಾಧಿಕಾರಿಗೆ ಇದೇ ವೇಳೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಬ್ಯಾಂಕಿನ ಆಡಳಿತಾಧಿಕಾರಿ ವರದಿ ಸಲ್ಲಿಸಿ, ಬ್ಯಾಂಕ್‌ ನೀಡಿದ ಸಾಲದ ಮೊತ್ತ ಮತ್ತು ಸಾಲ ಪಡೆದವರ ವಿವರಗಳನ್ನು ಸಲ್ಲಿಸಿದರು. ಜತೆಗೆ, ಈವರೆಗೂ ಸಾಲಗಾರರಿಂದ ಒಟ್ಟು 2.10 ಕೋಟಿ ರು. ವಸೂಲಿ ಮಾಡಲಾಗಿದೆ. ಸುಮಾರು 80 ಕೋಟಿಯವರೆಗೂ ಹೂಡಿಕೆದಾರರಿಗೆ ಠೇವಣಿ ಹಣ ಹಿಂದಿರುಗಿಸಲಾಗಿದೆ ಎಂದು ತಿಳಿಸಿದರು. ತನಿಖಾಧಿಕಾರಿ ವರದಿ ಸಲ್ಲಿಸಿ, ಹಗರಣ ಸಂಬಂಧ ಆರೋಪಿಗಳ ಬಂಧನದ, ಜಾಮೀನು ಪಡೆದವರ ಹಾಗೂ ತಲೆ ಮರೆಸಿಕೊಂಡ ಆರೋಪಿಗಳ ವಿವರಗಳನ್ನು ನೀಡಿದರು.